ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾನಪದ ಕಲೆ ರಕ್ಷಣೆಗೆ ಕರೆ

Rashmi Kasaragodu
Updated On : 20 Feb 2014, 2:13 am

ಹಾಸನ: ಜಾಗತಿಕ ಜಗತ್ತಿನಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡಿನ ಜಾನಪದ ಕಲೆಯನ್ನು ರಕ್ಷಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣಗೌಡ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ರಾಗಿ ಬೀಸುವಾಗ, ಕಣದ ಒಕ್ಕಣೆ ಸಂದರ್ಭದಲ್ಲಿ ಹಾಡುತ್ತಿದ್ದ ಜಾನಪದ ಹಾಗೂ ಮದುವೆಗಳಲ್ಲಿ ಸಂದರ್ಭಕ್ಕೆ ಅನುಸಾರವಾಗಿ ಹಾಡುತ್ತಿದ್ದ ಸೋಬಾನೆ ಪದಗಳು ಕಣ್ಮರೆಯಾಗುತ್ತಿವೆ ಎಂದರು.
ಶುಭ ಹಾರೈಕೆ: ಯುವ ಜನತೆ ತಮಗೆ ದೊರೆತಂತಹ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಸ್ಪರ್ಧೆಯಲ್ಲಿ ಆಯ್ಕೆಯಾಗಿ ವಿಭಾಗ ಮತ್ತು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗುವಂತೆ ಶುಭ ಹಾರೈಸಿದರು.
ಮೇಳ ಸಹಕಾರಿ: ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕ ಯುವತಿಯರು ತಮ್ಮಲ್ಲಿರುವ ಪ್ರತಿಭೆ ಹೊರ ಹೊಮ್ಮಿಸಲು ಈ ಯುವಜನ ಮೇಳ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಕಲೆಯ ಉಳಿವಿಗೆ ಮುಂದಾಗಿ: ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಮುರಳೀಧರ್ ಮಾತನಾಡಿ, ಈ ಕಾರ್ಯಕ್ರಮ ಯುವ ಜನತೆಯಲ್ಲಿ ಇರುವ ಕಲೆಯನ್ನು ಪ್ರೋತ್ಸಾಹಿಸುವುದರ ಧ್ಯೋತಕವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತವಾಗಿರುವ ಕಲೆಗಳ ಬಗ್ಗೆ ಯುವ ಜನರು ಅಭಿಮಾನ ಮತ್ತು ಆಸಕ್ತಿ ವಹಿಸಿ ಅವುಗಳನ್ನು ಮೈಗೂಡಿಸಿಕೊಂಡು ಕಲೆಯ ಉಳಿವಿಗೆ ಮುಂದಾಗುವಂತೆ ತಿಳಿಸಿದರು.
ಸರ್ಕಾರಿ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ್ ಸ್ವಾಗತಿಸಿದರು. ವಿದ್ಯಾರಾಣಿ ಪ್ರಾರ್ಥಿಸಿದರು. ಸ್ವರೂಪ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement