ಜ್ಞಾನ, ನಂಬಿಕೆ ಬೆಳೆಸಿಕೊಳ್ಳಲು ಯುವಕರಿಗೆ ಕರೆ
ಹೊಳೆನರಸೀಪುರ: ಅಪ್ರತಿಮ ದೇಶಪ್ರೇಮಿ ಸ್ವಾಮಿ ವಿವೇಕಾನಂದರಂತೆಯೇ ಪ್ರತಿಯೊಬ್ಬ ಯುವಕನೂ ದೇಶ, ಸಂಸ್ಕೃತಿ, ಧರ್ಮದ ಬಗ್ಗೆ ಅಪಾರ ಜ್ಞಾನ ಮತ್ತು ನಂಬಿಕೆಯನ್ನು ಬೆಳೆಸಿಕೊಂಡಾಗ ಮಾತ್ರವೇ ಭವಿಷ್ಯದ ಭಾರತ ಉಜ್ವಲಿಸಲು ಸಾಧ್ಯ ಎಂದು ಶಿಕ್ಷಕರು ಹಾಗೂ ಪತ್ರಿಕಾ ಅಂಕಣಕಾರ ಡ್ಯಾನಿ ಪಿರೇರಾ ಅಭಿಪ್ರಾಯಪಟ್ಟರು.
ತಾಲೂಕಿನ ಹಳ್ಳಿಮೈಸೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 151ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿವೇಕಾನಂದರ ಬದುಕಿನಲ್ಲಿ ಬಂದ ಕಷ್ಟಗಳನ್ನೆಲ್ಲಾ ಹೇಗೆ ಎದುರಿಸಿದರೋ ಹಾಗೆಯೇ ತಾವೂ ಕೂಡ ತಮ್ಮ ಬದುಕಿನ ಕಷ್ಟಗಳನ್ನು ಜಯಿಸಿ ಯಶಸ್ಸಿನೆಡೆಗೆ ನಡೆಯಲು ಕಿವಿಮಾತು ಹೇಳಿದರು.
ಅಧ್ಯಾಪಕ ಕೇವಲ ಮಾರ್ಗದರ್ಶಿ. ಆದರೆ, ವಿದ್ಯಾರ್ಥಿಗಳು ಸ್ವಂತ ಕಲಿಕೆಯಿಂದ ಕಲಿಕೆ ಸಾಕಾರ ಮಾಡಿಕೊಳ್ಳಬೇಕು. ವಿವೇಕಾನಂದರ ಮೌಲ್ಯ ಮತ್ತು ಚಿಂತನೆಗಳನ್ನು ಇಂದಿನ ಯುವಶಕ್ತಿ ಅಳವಡಿಸಿಕೊಂಡು ದೇಶಕ್ಕೆ ಬೆಳಕು, ಸಮಾಜಕ್ಕೆ ಶಕ್ತಿಯಾಗಬೇಕು ಎಂದು ಅವರು ಕರೆ ನೀಡಿದರು.
ಆದರ್ಶ ಗುಣ ಬೆಳೆಸಿಕೊಳ್ಳಬೇಕು: ವಿವೇಕಾನಂದರು ಬಯಸಿದಂತೆ ಯುವಕರು ಸದೃಢವಾದ ಉಕ್ಕಿನ ನರಮಂಡಲವುಳ್ಳ ದೇಹವನ್ನು ಮತ್ತು ಅಚಲವಾದ ಮನಸ್ಸನ್ನು ಹೊಂದಿ, 21ನೇ ಶತಮಾನದಲ್ಲಿ ಭಾರತ ವಿಶ್ವಕ್ಕೆ ಮಾದರಿ ಎನಿಸುವಂತಹ ಮತ್ತು ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಅತಿಮುಖ್ಯ ಎಂದರು.
ತತ್ವ ಅಳವಡಿಸಿಕೊಳ್ಳಬೇಕು: ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಎಸ್. ಸಂಪತ್ ಕುಮಾರನ್ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ, ತತ್ವ, ಸಿದ್ಧಾಂತ ಮತ್ತು ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಭವಿಷ್ಯ ಉತ್ತಮಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿನಿಯರಾದ ಚೈತ್ರಾ ಹೆಚ್.ಎಸ್. ಮತ್ತು ಎಸ್.ಎಂ. ನಿಶ್ಚಿತ ವಿವೇಕಾನಂದರ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಮತ್ತು ವಿವೇಕಾನಂದರ ವಿದ್ವತ್ ವಾಣಿ ಪ್ರತಿಗಳ ಹಂಚಿಕೆ, ಹಸ್ತ ಪತ್ರಿಕೆ, ಗೋಡೆ ಪತ್ರಿಕೆ ಮತ್ತು ವಿವೇಕಾನಂದರ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಹಳ್ಳಿಮೈಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್, ಕಾಲೇಜಿನ ಗ್ರಂಥಪಾಲರಾದ ವಿನೋದ್ ಕುಮಾರ್, ಉಪನ್ಯಾಸಕರಾದ ರವಿಕುಮಾರ್, ಎಚ್.ಟಿ. ವಸಂತಕುಮಾರ್, ಮಹೇಶ್. ಈರೇಗೌಡ ಇದ್ದರು.