'ವಿದ್ಯಾರ್ಥಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ ಅವಶ್ಯ'
ಜಾವಗಲ್: ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆ ಅತ್ಯವಶ್ಯಕವಾಗಿರಬೇಕು ಎಂದು ಅರಸೀಕೆರೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್. ಆರ್. ನಾಗರಾಜಪ್ಪ ಅಭಿಪ್ರಾಯಪಟ್ಟರು.
ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಹಿತ್ಯ, ಸಾಂಸ್ಕೃತಿಕ, ಕಲೆ, ವಿಜ್ಞಾನ, ಹಾಗೂ ಕ್ರೀಡಾ ಸಂಘದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಮಾನವನ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಮುಖ್ಯ ಎಂದರು ನೀತಿ, ನೈಜತೆ ಹಾಗೂ ಪ್ರಾಮಾಣಿಕತೆ ಸಮಾಜ ಬೆಳೆಸಲು ಸಹಾಯಕವಾಗುತ್ತದೆ ಎಂದರು.
ಭಾರತೀಯ ಸಂಸ್ಕೃತಿಯು ವಿಶ್ವ ಶ್ರೇಷ್ಠವಾಗಿದ್ದು, ಇದನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸಬೇಕಾದ ಅನಿವಾರ್ಯತೆ ಇದೆ ಎಂದರು.
ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ, ಗಾಂಧಿ, ಕುವೆಂಪು ರವರ ಆದರ್ಶ ಮತ್ತು ಮಾರ್ಗದರ್ಶನ ಅತ್ಯವಶ್ಯಕ. ಮಗು ಹುಟ್ಟಿನಿಂದ ವಿಶ್ವಮಾನವನಾಗಿ ಬಂದಿರುತ್ತದೆ, ಮಗುವನ್ನು ಮನುಷ್ಯನನ್ನಾಗಿ ಮಾಡಲು ವಿದ್ಯೆ ಮುಖ್ಯ ಎಂದರು.
ಭವಿಷ್ಯ ರೂಪಿಸಿಕೊಳ್ಳಿ: ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಗಳು ಅತ್ಯಗತ್ಯ. ಗುಣಮಟ್ಟದ ಶಿಕ್ಷಣವನ್ನು ಪಡೆದು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಜಾವಗಲ್ ಪಿ.ಎಸ್.ಐ.ಸಿಪಿ ನವೀನ್ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ಶಿಸ್ತನ್ನು ಪಾಲಿಸಬೇಕೆಂದರು.
ಗ್ರಾಪಂ ಅದ್ಯಕ್ಷೆ ಕವಿತ ಮಂಜುನಾಥ್, ಜೆ.ಹೆಚ್. ಪ್ರಸನ್ನಕುಮಾರ್ ಉಪನ್ಯಾಸಕರಾದ ಎನ್. ಉದಯಕುಮಾರ್, ಶ್ರೀನಿವಾಸ್, ಮರುಳುಸಿದ್ದಪ್ಪ, ಮಂಜುನಾಥ್ ಮಾತನಾಡಿದರು. ವಾರ್ಷಿಕ ವರದಿಯನ್ನು ಉಪನ್ಯಾಸಕ ನಾಗರಾಜು, ಶಿಕ್ಷಕಿ ಸವಿತ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ವಸಂತರಾಜೇ ಅರಸ್ ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ವಿನಯ, ಶಿಸ್ತು ಬೆಳೆಸಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ, ಮತ್ತು ನೈತಿಕ ಮೌಲ್ಯಗಳು ಅತ್ಯವಶ್ಯಕವಾಗಿರಬೇಕಾಗಿದೆ ಎಂದರು.
ಉಪಪ್ರಾಂಶುಪಾಲ ಯೋಗೀಶ್, ಜೆ.ಕೆ. ಚಿಕ್ಕಯ್ಯ ಇದ್ದರು. 8ನೇ ತರಗತಿಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಕೆರೆಗೆ ಹಾರ ನಾಟಕವು ಪ್ರೇಕ್ಷಕರ ಮನಸೂರೆಗೊಳಿಸಿತು.