ಸರ್ದಾರ್ ಪಟೇಲ್ ಅಪ್ರತಿಮ ರಾಜಕಾರಣಿ'
ಅರಸೀಕೆರೆ: ಸರ್ದಾರ್ ವಲ್ಲಭಾಯ್ ಪಟೇಲ್ ಅವರು ದೇಶ ಕಂಡ ಅಪ್ರತಿಮ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆಯ ನಿರ್ಮಾಣ ಇಂದಿನ ದಿನಗಳಲ್ಲಿ ಅಗತ್ಯವಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ದುಮ್ಮೆನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಯ ಮುಂದೆ ಮಂಗಳವಾರ ಆಯೋಜಿಸಲಾಗಿದ್ದ ಲೋಹ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ದಾರ್ ಪ್ರತಿಮೆಗಾಗಿ ಲೋಹ ಸಂಗ್ರಹ ಕಾರ್ಯ ಶುರುವಾಗಿದ್ದು, ಇದಕ್ಕಾಗಿ ಎಲ್ಲರೂ ಉದಾರ ಮನಸ್ಸಿನಿಂದ ತಮ್ಮ ಮನೆಯಲ್ಲಿ ಉಪಯೋಗವಾಗದೇ ಬಿದ್ದಿರುವ ಕಬ್ಬಿಣದ ವಸ್ತುಗಳನ್ನು ದಾನ ಮಾಡಬೇಕೆಂದು ಮನವಿ ಮಾಡಿದರು.
ಹೆಮ್ಮೆಯ ಸಂಗತಿ: ಈ ಸಂದರ್ಭದಲ್ಲಿ, ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವೇಳೆ ಕಗ್ಗಂಟಾಗಿ ಪರಿಣಮಿಸಿದ್ದ ರಾಜ್ಯಗಳನ್ನು ಒಕ್ಕೂಟ ವ್ಯವಸ್ಥೆಗೆ ತರುವ ಪ್ರಯತ್ನವನ್ನು ಸಮರ್ಥವಾಗಿ ನಿಭಾಯಿಸಿದ ಪರಿಣಾಮ ಇಂದು ಜಮ್ಮ- ಕಾಶ್ಮೀರ, ಹೈದಾರಬಾದ್ನಂತಹ ಪ್ರಾಂತ್ಯಗಳು ಭಾರತದ ಅವಿಭಾಜ್ಯ ಅಂಗವಾಗಿ ರೂಪಗೊಳ್ಳಲು ಸಾಧ್ಯ. ಇಂತಹ ಧೀಮಂತ ವ್ಯಕ್ತಿಯ ಲೋಹ ಪ್ರತಿಮೆಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರ್ಮಿಸಲು ಹೊರಟಿರುವುದು ಹೆಮ್ಮೆ ಪಡುವ ಸಂಗತಿ ಎಂದರು.
ಎಪಿಎಂಸಿ ಸದಸ್ಯ ದುಮ್ಮೇನಹಳ್ಳಿ ಗಂಗಾಧರ್ ಮಾತನಾಡಿ, 50- 60ರ ದಶಕದ ರಾಜಕಾರಣಿಗಳಲ್ಲಿದ್ದ ಬದ್ಧತೆ, ದೇಶಪ್ರೇಮ, ಇಂದಿನ ರಾಜಕಾರಣಿಗಳಲ್ಲಿ ಮಾಯವಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಚುನಾಯಿತ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಇದೇ ವೇಳೆ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಲೋಹದ ತುಣುಕುಗಳನ್ನು ನೀಡಿದರು.