ಕನಸು ಪೂರ್ಣಗೊಂಡ ನಂತರವೇ ರಾಜಕೀಯ ಜೀವನ ಅಂತ್ಯ
ಹಾಸನ: ಜಿಲ್ಲೆ ಹಾಗೂ ರಾಜ್ಯವನ್ನು ಯಾವ ರೀತಿ ಅಭಿವೃದ್ಧಿ ಪಡಿಸಬೇಕೆಂಬ ಕನಸಿದ್ದು, ಅದು ಪೂರ್ಣಗೊಂಡ ನಂತರವೇ ನನ್ನ ರಾಜಕೀಯ ಜೀವನ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನದಲ್ಲಿ ಜಿಲ್ಲೆಯನ್ನು ಯಾವ ರೀತಿ ಅಭಿವೃದ್ದಿ ಪಡಿಸಬೇಕು. ರಾಜ್ಯವನ್ನು ಇನ್ನಷ್ಟು ಹೇಗೆ ಬಲಪಡಿಸಬೇಕು ಅನ್ನೋ ಕಾರ್ಯಕ್ರಮಗಳಿವೆ. ಅವುಗಳನ್ನು ಪೂರೈಸಿಯೇ ನನ್ನ ರಾಜಕೀಯ ಅಂತ್ಯವಾಗಲಿದೆ.
ರಾಜಕೀಯ ತುಂಬಾ ಹದಗೆಟ್ಟಿದೆ, ಇಂಥ ವಾತಾವರಣದಲ್ಲಿ ನಾನು ಮತ್ತೊಮ್ಮೆ ಚುನಾವಣೆಗೆ ನಿಲ್ಲಬೇಕಾ ನಾನೊಬ್ಬನೇ ಗೆದ್ದು ಏನು ಮಾಡಲು ಸಾಧ್ಯ ಅನ್ನೋ ನೋವು ನನ್ನನ್ನ ಕಾಡುತ್ತಿದೆ ಎಂದ ಅವರು, ನನ್ನ ಸುಧೀರ್ಘ ರಾಜಕೀಯ ಪಯಣಕ್ಕೆ ಎಲ್ಲಾ ವರ್ಗದ, ಎಲ್ಲಾ ಸಮುದಾಯದ ಜನರೂ ನಮ್ಮ ಗೌಡ ಅನ್ನೋ ಭಾವನೆಯಿಂದ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಜನ ಮತ್ತು ರಾಜ್ಯದ ಜನತೆ ಆಶೀರ್ವಾದ ಮತ್ತು ದೈವಇಚ್ಛೆಯಿಂದ ಪ್ರಧಾನಿಯಾಗಿದೆ ಎಂದ ಅವರು, ನನ್ನ ವಿರೋಧಿಗಳು ಹೇಳುತ್ತಿರುವ ಮಟ್ಟಿಗೆ ಜೆಡಿಎಸ್ ಅಷ್ಟು ಸುಲಭವಾಗಿ ನಾಶವಾಗುವುದಿಲ್ಲ, ಕಾದು ನೋಡಿ ಎಂದು ನುಡಿದರು.