ಕಳವು ಆರೋಪಿ ಸೆರೆ - ರು. 3 ಲಕ್ಷದ ಚಿನ್ನಾಭರಣ ವಶ
ಅರಸೀಕೆರೆ: ಪಟ್ಟಣದ ನಾನಾ ಕಡೆ ಕಳ್ಳತನ ನಡೆಸಿದ್ದ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು 3 ಲಕ್ಷ ರು. ಮೌಲ್ಯದ 109 ಗ್ರಾಂ ಚಿನ್ನ, 10 ಸಾವಿರ ಮೌಲ್ಯದ 200 ಗ್ರಾಂ ಬೆಳ್ಳಿ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ನಿವಾಸಿ ರಾಜುಗಡಿಯಪ್ಪ(25) ಬಂಧಿತ ಆರೋಪಿ.
ಪಟ್ಟಣದ ಪೇಟೆ ಬೀದಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಆತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂತು. ಈತನ ಮೇಲೆ ಈಗಾಗಲೇ 5 ಪ್ರಕರಣಗಳು ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿವೈಎಸ್ಪಿ ಐ.ಜಿ.ಮಂಜುನಾಥ್ ಮಾರ್ಗದರ್ಶನದಲ್ಲಿ ನಗರ ಠಾಣೆಯ ವೃತ್ತ ನಿರೀಕ್ಷಕ ಬಿ.ಎಸ್.ನಂದಕುಮಾರ್, ಪಿಎಸ್ಐ ಅಯ್ಯನ್ಗೌಡ, ಲೋಕೇಶ್, ಎಎಸ್ಐ ಚಂದ್ರಶೇಖರ್, ಭೀಮನಾಯ್ಕ್ ಹಾಗೂ ಸಿಬ್ಬಂದಿ ನಂಜುಂಡೇಗೌಡ, ರವಿ, ತ್ರಿಮೂರ್ತಿ, ಹೀರಾಸಿಂಗ್, ಜಗನ್ನಾಥ್, ಶಿವಕುಮಾರ್ನಾಯ್ಕ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಕ್ಕೆ ಸಾರ್ವಜನಿಕರು ಪ್ರಶಂಸಿಸಿದ್ದಾರೆ.