ಚತುಷ್ಪಥ ರಸ್ತೆ ಅಭಿವೃದ್ಧಿಗೆ ರು. 3 ಕೋಟಿ ಅನುದಾನ
ಹಾಸನ: ಹಾಸನದ ರಿಂಗ್ರಸ್ತೆಯ ಹಳೇಬೀಡು ರಸ್ತೆಯಿಂದ ಬೇಲೂರು ರಸ್ತೆವರೆಗೆ 3.18 ಕಿ.ಮೀ ನಿಂದ 5.25 ಕಿ.ಮೀ ವರೆಗೆ ನಾಲ್ಕು ಪಥದ ರಸ್ತೆ ಅಭಿವೃದ್ಧಿ ಪಡಿಸಲು 3 ಕೋಟಿ ರು. ಅನುದಾನ ಒದಗಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. 5.25 ಕಿ.ಮೀ ದಿಂದ 7.00 ಕಿ.ಮೀ ವರೆಗೆ, ಅಂದರೆ ಬೇಲೂರು ರಸ್ತೆಯವರೆಗೆ 13 ಎಕರೆ 39 1-4 ಗುಂಟೆ ಖಾಸಗಿ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದು, ಜಿಲ್ಲಾಧಿಕಾರಿಯವರು, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ, ಜಿಲ್ಲಾ ಪೊಲೀಸ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದು, ಪ್ರಾಧಿಕಾರದ ಅಧಿಕಾರಿಗಳು ಈ ಭಾಗದ ರಸ್ತೆ ಜಾಗವನ್ನು ಬಿಡಿಸಿ ಕೊಡುವುದಾಗಿ ತಿಳಿಸಿರುತ್ತಾರೆ. 2007 ರಲ್ಲಿ ಭೂಸ್ವಾಧೀನಕ್ಕಾಗಿ ಪ್ರಾರಂಭಿಕ ಠೇವಣಿಯಾಗಿಡಲು 54.75 ಲಕ್ಷ ರು. ಬಿಡುಗಡೆಗೊಳಿಸಿದ್ದು, ಪ್ರಕ್ರಿಯೆ ಅಂತಿಮಗೊಳ್ಳದ ಕಾರಣ ಅಧಿಕಾರಿಗಳಿಂದ ಭೂಸ್ವಾಧೀನ ಮೊತ್ತವು ಮರು ನಿಗದಿಗೊಂಡ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು.