ನೆಲ, ಭಾಷೆ ಉಳಿವಿಗೆ ಚಳವಳಿ
ಕನ್ನಡಪ್ರಭ ವಾರ್ತೆ ಹಾಸನ ಫೆ 20
ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಕನ್ನಡದ ಮನಸ್ಸುಗಳು ಹೋರಾಟ ಹಮ್ಮಿಕೊಳ್ಳಬೇಕಾದ ಪರಿಸ್ಥಿತಿಗೆ ತಲುಪಿರುವುದು ದುರಂತ ಎಂದು 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಎನ್.ಎಲ್.ಚನ್ನೇಗೌಡರು ಅಸಮಧಾನ ವ್ಯಕ್ತಪಡಿಸಿದರು.
ತಾಲೂಕಿನ ಗೊರೂರಿನ ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆಯಲ್ಲಿ ನಡೆದ ಹಾಸನ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದ ಅವರು, ನೆಲ, ಜಲ ಮತ್ತು ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕು ನಿಜ. ಆದರೆ ಭಾಷಾಭಿಮಾನ ಪ್ರಕ್ಷುಬ್ಧ ವಾತಾವರಣ ಉಂಟು ಮಾಡಬಾರದು. ಧರ್ಮಾಂಧತೆ, ಮತಾಂಧತೆ, ಭಾಷಾಂಧತೆ ಒಂದು ಮಾದಕ ವಸ್ತುವಿದ್ದಂತೆ. ಜನರನ್ನು ಬಹುತೇಕ ಉದ್ರೇಕಗೊಳಿಸುತ್ತದೆ. ಆವೇಶ ಉದ್ರೇಕಗಳಿಂದ ಭಾಷೆಯಾಗಲಿ, ಧರ್ಮವಾಗಲಿ ಪ್ರಬುದ್ಧಮಾನಕ್ಕೆ ಬರಲು ಸಾಧ್ಯವಿಲ್ಲ ಎಂದರು.
ಪರಿಸರ ನಾಶವಾಗುತ್ತಿದೆ ಎಂದ ಅವರು, ವಿಧಾನಸೌಧದಲ್ಲಿ ಸಂಪೂರ್ಣವಾಗಿ ಕನ್ನಡ ಬಳಕೆಯಾಗದೆ ಕನ್ನಡ ಭಾಷೆಗೆ ಉಳಿಗಾಲವಿಲ್ಲ ಎಂದು ತಿಳಿಸಿದರು. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯನ್ನಾಗಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಕನ್ನಡ ಭಾಷೆಯನ್ನು ಶಾಸ್ತ್ರೀಯ ಭಾಷೆಯನ್ನಾಗಿಯೂ ಅಂಗೀಕರಿಸಿದೆ. ಆದರೆ ಈ ಎಲ್ಲಾ ಆದೇಶಗಳು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಸರ್ಕಾರ ಮೈಮರೆಯತ್ತಿದೆ. ವಿಧಾನಸೌಧದಲ್ಲಿಯೇ ಕನ್ನಡ ಬಳಕೆ ನಿಧಾನವಾಗುತ್ತಿದೆ. ಆಡಳಿತಾತ್ಮಕ ಸಮಸ್ಯೆಗಳು ನೂರಾರು ಇರಬಹುದು. ಆದರೆ ಅನುಷ್ಠಾನಕ್ಕೆ ತರುವ ಮನಸ್ಸುಗಳು ನಿದ್ರಿಸುತ್ತಿದ್ದು, ಎಚ್ಚರಗೊಳ್ಳಬೇಕಾಗಿದೆ ಎಂದು ಹೇಳಿದರು.
ಮಾತೃಭಾಷೆ ಬಗ್ಗೆ ಅಭಿಮಾನ ಕುಂಠಿತ: ಗ್ರಾಮಾಂತರ ಶಾಲೆಗಳು ಮುಚ್ಚುತ್ತಿವೆ. ನಮ್ಮ ಮಕ್ಕಳಿಗೆ ಮಾತೃಭಾಷೆ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದೆ. ಇದಕ್ಕೆಲ್ಲಾ ಕಾರಣರಾರು ಎಂಬ ಪ್ರಶ್ನೆಗೆ ನಾವೇ ಎಂಬ ಉತ್ತರ ಸಿದ್ದವಾಗಿದೆ. 7ನೇ ತರಗತಿಯ ವಿದ್ಯಾರ್ಥಿಗೆ ಸರಿಯಾಗಿ ಕನ್ನಡವನ್ನು ಓದಲು ಬರೆಯಲು ಬರುವುದಿಲ್ಲ.
ನಮ್ಮ ಭಾಷೆ ಸಂಸ್ಕೃತಿ, ಅರೆದುರು ಸವಕಲು ನಾಣ್ಯ ಪಾಶ್ಚಿಮಾತ್ಯ ನೃತ್ಯದತ್ತ ಆಕರ್ಷಣೆ, ಇವೆಲ್ಲವನ್ನು ನೀವು ಗಮಿಸಬೇಕಾದರೆ ನಿಮ್ಮ ಮಕ್ಕಳ ಶಾಲೆಯ ವಾರ್ಷಿಕೋತ್ಸವ ನೋಡಿದರೆ ಸಾಕು. ಈ ವ್ಯವಸ್ಥೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೂ ಏಕರೂಪದ ಶಿಕ್ಷಣ ಸಿಗುವುದು ಕಷ್ಟ. ಆದ್ದರಿಂದ ಏಕರೂಪದ ಶಿಕ್ಷಣ ಕಡ್ಡಾಯವಾಗಿ ಜಾರಿಗೆ ಬರಬೇಕು. ಐದನೇ ತರಗತಿಯಲ್ಲಿ ಓದುವ ಗ್ರಾಮೀಣ ಮತ್ತು ನಗರಪ್ರದೇಶದ ಮಕ್ಕಳ ಪುಸ್ತಕ ಒಂದೇ ಆಗಿಸಬೇಕು ಎಂದು ಹೇಳಿದರು.
ನಿರ್ಣಯ: ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹುಟ್ಟಿ ಬೆಳೆದ ಮನೆ ಇಲ್ಲಿದೆ.
ಆ ಮನೆಯನ್ನು ಸರ್ಕಾರ ಸ್ಮಾರಕ ಭವನವನ್ನಾಗಿ ಅಭಿವೃದ್ಧಿ ಪಡಿಸಬೇಕು. ತಾಲೂಕಿನ ಅನೇಕ ಸ್ಥಳಗಳಲ್ಲಿ ಹೊಯ್ಸಳ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಗುಡಿ ಗೋಪುರಗಳಿದ್ದು, ಇವುಗಳನ್ನು ಅಭಿವೃದ್ಧಿ ಪಡಿಸಿ ಸರ್ಕಾರ ಯಾತ್ರಾಸ್ಥಳವೆಂದು ಘೋಷಿಸಬೇಕು. ಗೊರೂರಿನ ಅಣೆಕಟ್ಟೆಯ ತಳಭಾಗದಲ್ಲಿ ಇರುವ ಖಾಲಿ ಜಾಗವನ್ನು ಬೃಂದಾವನವನ್ನಾಗಿ ಅಭಿವೃದ್ಧಿ ಮಾಡಿ ಪ್ರವಾಸಿಗರಿಗೆ ತಂಗುದಾಣವನ್ನು ನಿರ್ಮಿಸುವ ಕೆಲಸ ಸರ್ಕಾರದಿಂದ ಆಗಬೇಕು.
ಹಾಸನ-ಅರಕಲಗೂಡು ಸಂಪರ್ಕ ಸೇತುವೆ ಶಿಥಿಲಗೊಂಡಿದೆ. ವಾಹನದ ದಟ್ಟಣೆ ಹೆಚ್ಚಾಗಿದ್ದು, ಇದರಿಂದ ಈ ಸಂಪರ್ಕ ಸೇತುವೆಯನ್ನು ಹೊಸದಾಗಿ ನಿರ್ಮಾಣ ಮಾಡಲು ಸರ್ಕಾರ ತ್ವರಿತವಾಗಿ ಕಾರ್ಯೋನ್ಮುಖವಾಗಲಿ. ಚಂಗರವಳ್ಳಿ ನಾಲೆಯಲ್ಲಿ ಕೊನೆಯ ಅಂತರದವರೆವಿಗೂ ನೀರು ಸರಿಯಾಗಿ ಹರಿಯದೆ ಕೊನೆಯ ಅಂತದ ರೈತರು ಭತ್ತದ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ಈ ನಾಲೆಯ ಕೊನೆಯ ಅಂತದಲ್ಲಿ ಹೂಳು ತೆಗೆಸಿ ನೀರು ಕೊನೆ ಅಂತ ತಲುಪುವ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆ ತ್ವರಿತವಾಗಿ ಮಾಡಬೇಕು ಎಂದು ಮೂಲಕ ಒತ್ತಾಯಿಸಿದರು.
ಹಾಸನ-ಆಲೂರು-ಸಕಲೇಶಪುರ ತಾಲೂಕಿನಲ್ಲಿ ಆನೆ, ಚಿರತೆಗಳ ದಾಳಿಯಿಂದ ರೈತರು ಜೀವ ಭಯದಿಂದ ಬದುಕುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ತುರ್ತು ಕ್ರಮಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಭೆಯಲ್ಲಿ ಮಂಡಿಸಿದರು.
ಭಾವುಕತೆಯಿಂದ ಭಾಷೆ ರಕ್ಷಣೆಯಾಗದು
ಕೇವಲ ಆವೇಶ, ಭಾವುಕತೆ, ಪ್ರಚೋದನಕಾರಿ ಭಾಷಣಗಳಿಂದ ನೆಲ ಜಲ ಕನ್ನಡ ಭಾಷೆಯ ರಕ್ಷಣೆ ಸಾಧ್ಯವಿಲ್ಲ. ನೆಲ ಜಲ ರಕ್ಷಿಸುವ ಇಚ್ಛಾಶಕ್ತಿ ನಮ್ಮಲ್ಲಿ ಮೂಡಬೇಕು. ಇಚ್ಛಾಶಕ್ತಿಯ ಕೊರತೆಯಿಂದ ಭಾಷೆ ಕಳೆಗುಂದುತ್ತಿದೆ.
ಟಿ ಎನ್.ಎಲ್.ಚನ್ನೇಗೌಡ, ಸಮ್ಮೇಳನಾಧ್ಯಕ್ಷ