ಮೈಸೂರು ವಿವಿ ಸಂಯೋಜನಾ ತಂಡ ಭೇಟಿ
ಜಾವಗಲ್: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೈಸೂರು ವಿಶ್ವವಿವಿದ್ಯಾನಿಲಯದ ಸಂಯೋಜನಾ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ರೊ. ಆರ್. ರಾಜಣ್ಣ ನೇತೃತ್ವದಲ್ಲಿ ಪ್ರೊ.ಮುಜಾಫರ್ ಅಸಾದಿ, ಪ್ರೊ. ಎಂ.ಜಿ ಮಂಜುನಾಥ್ ಅವರನ್ನು ಒಳಗೊಂಡ ತಂಡವು ಭೇಟಿ ನೀಡಿತು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ ಭಾಷಾ ಮತ್ತು ಉಪನ್ಯಾಸಕ ವರ್ಗದವರು ತಂಡ ಸ್ವಾಗತಿಸಿದರು. ಕಾಲೇಜು ಪರಿಸರ, ವಿದ್ಯಾರ್ಥಿಗಳ ಸಂಖ್ಯೆ, ಉಪನ್ಯಾಸಕರು, ಅತಿಥಿ ಉಪನ್ಯಾಸಕರು, ಕೊಠಡಿಗಳು, ಮೂಲ ಸೌಕರ್ಯವ್ಯವಸ್ಥೆ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ವ್ಯಾಸಂಗದ ಮಟ್ಟ, ಪಠ್ಯೇತರ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ, ಸೆಮಿನಾರ್, ಗ್ರಂಥಾಲಯ ವ್ಯವಸ್ಥೆ ಸೇರಿದಂತೆ ಕಾಲೇಜಿಗೆ ಸಂಬಂಧ ಪಟ್ಟ ಸಮಗ್ರ ಮಾಹಿತಿಗಳ ಬಗ್ಗೆ ಪರಿಶೀಲಿಸಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರೊಂದಿಗೆ ಚರ್ಚಿಸಿದರು. ಪ್ರಾಂಶುಪಾಲ ಭಾಷಾ ಅವರು ತಂಡಕ್ಕೆ ಕಾಲೇಜಿಗೆ ಸಂಬಂಧಿಸಿದ ಸಮಗ್ರ ಮಾಹಿತಿಗಳನ್ನು ವಿವರಿಸಿದರು. ತಂಡದ ಸದಸ್ಯ ಪ್ರೊ. ಮುಜಾಫರ್ ಅಸಾದಿ ಮಾತನಾಡಿ, ಗ್ರಾಮಾಂತರ ಕಾಲೇಜಿನಲ್ಲಿ ಉತ್ತಮ ಗ್ರಂಥಾಲಯ ವ್ಯವಸ್ಥೆ ಇದ್ದು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ನಾನಾ ಲೇಖಕರುಗಳ ಪುಸ್ತಕಗಳನ್ನು ವ್ಯವಸ್ಥೆ ಮಾಡುವಂತೆ ಸೂಚಿಸಿದರು. ವಿದ್ಯಾರ್ಥಿಗಳು ಪಠ್ಯೇತರ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವಂತೆ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಪ್ರೊ.ಎಂ.ಜಿ ಮಂಜುನಾಥ್ ಗ್ರಂಥಾಲಯಕ್ಕೆ ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳ ಸದಸ್ಯತ್ವ ಪಡೆದು, ಗ್ರಂಥಾಲಯಕ್ಕೆ ವಿವಿ ಗಳ ಪತ್ರಿಕೆಗಳ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಿದರು. ಕಾಲೇಜಿನ ಪರಿಸರ ಉತ್ತಮವಾಗಿದ್ದು ಸಾಕಷ್ಟು ಕೊಠಡಿ ವ್ಯವಸ್ಥೆ ಹಾಗೂ ಕಾಂಪೌಂಡು ವ್ಯವಸ್ಥೆ ಇರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಹ ಪ್ರಾಧ್ಯಾಪಕ ಬಿ.ಶಿವಕುಮಾರ್, ಶಂಕರಲಿಂಗೇಗೌಡ, ಶಿವಶಂಕರಮೂರ್ತಿ, ಸತೀಶ್, ಗ್ರಂಥಪಾಲಕಿ ದೀಪಿತಾ ಇದ್ದರು.