ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜೀವ್ ಹಂತಕರ ವಿಚಾರದಲ್ಲಿ ರಾಜಕೀಯ ಸಲ್ಲದು: ದೇವೇಗೌಡ

Rashmi Kasaragodu
Updated On : 21 Feb 2014, 1:05 am

ಕನ್ನಡಪ್ರಭ ವಾರ್ತೆ೤ ಹಾಸನ೤ ಫೆ. 20
ಮಾಜಿ ಪ್ರಧಾನಿ ರಾಜೀವ್ಗಾಂಧಿ ಹತ್ಯೆ ಹಂತಕರ ಬಿಡುಗಡೆ ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಮತ್ತು ಕೇಂದ್ರ ಸರಕಾರದ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿರುವ ರಾಜೀವ್ಗಾಂಧಿ ಹತ್ಯೆ ಹಂತಕರ ಬಿಡುಗಡೆ ವಿಷಯದಲ್ಲಿ ರಾಜಕೀಯ ಬೆರೆಸಿ ಲಾಭ ಪಡೆಯುವುದು ಎಳ್ಳಷ್ಟೂ ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.
ಈಗಾಗಲೇ ಹಂತಕರು 23 ವರ್ಷ ಸೆರೆವಾಸ ಅನುಭವಿಸಿದ್ದಾರೆ. ಈ ಹಿಂದೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಹಂತಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದವು. ತಮಿಳುನಾಡಿನ ರಾಜಕೀಯ ಯಾವಾಗಲೂ ಹೀಗೆ.
ರಾಜಕೀಯ ಬೆರೆಸಲು ಇಷ್ಟ ಪಡುವುದಿಲ್ಲ:  ಈ ಕಾರಣದಿಂದಲೇ ನಾವು ಕಾವೇರಿ ನೀರು ಕಳೆದುಕೊಂಡೆವು. ಹಂತಕರ ಬಿಡುಗಡೆ ವಿಷಯ ಇಷ್ಟು ಬೆಳೆಸಬಾರದಿತ್ತು. ಎಲ್ಲದಕ್ಕೂ ರಾಜಕೀಯ ಮಾಡಲು ಹೋದರೆ ಮತ್ತೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಆದ್ದರಿಂದ ಯಾರೂ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಬಾರದು ಎಂದ ಗೌಡರು, ನಾನು ರಾಜಕೀಯ ಬೆರೆಸಲು ಇಷ್ಟ ಪಡುವುದಿಲ್ಲ. ಈ ವಿಷಯದಲ್ಲಿ ರಾಹುಲ್ಗಾಂಧಿ ಹೇಳಿಕೆ ಅಪ್ರಸ್ತುತ ಎಂದು ನುಡಿದರು.   
ಚುನಾವಣೆ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಕಾಂಗ್ರೆಸ್ - ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದ ಅವರು, ಇಂದು ಇದ್ದ ರಾಜಕೀಯ ನಾಳೆ ಇರುವುದಿಲ್ಲ. ಮಾಧ್ಯಮಗಳ ಅಭಿಪ್ರಾಯ ಕ್ರೋಢೀಕರಣಕ್ಕೆ ಶಕ್ತಿ ಇದೆ ನಿಜ. ಆದರೆ ದಿನೇ ದಿನೇ ಸಮೀಕ್ಷೆ ವರದಿ ಪ್ರಕಟಿಸಿ ಬೇರೆಯದೇ ವಾತಾವರಣ ಸೃಷ್ಟಿಸುವುದು ನಾವೇ ಫೈನಲ್ ಎಂಬಂತಾಗುತ್ತದೆ ಎಂದರು.
ಮತದಾರನ ಅಂತರಂಗ ಬಹಿರಂಗವಾಗದ ಹೊರತು ಏನನ್ನೂ ಹೇಳಲಾಗದು. ಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಬೆಂಬಲ ಸಿಗುತ್ತೋ ಗೊತ್ತಿಲ್ಲ. ಆದರೆ ಬಿಜೆಪಿ ಮೇಲುಗೈ ಪಡೆಯಲಿದೆ ಅನ್ನೋ ವಾತಾವರಣ ಸೃಷ್ಟಿಸಲಾಗುತ್ತಿದೆ. ವಾಸ್ತವದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಬಂಡವಾಳ ಏನು ಅನ್ನೋದು ಎಲ್ಲರಿಗೂ ತಿಳಿದಿದ್ದು, ಇಬ್ಬರೂ ಒಂದೇ ನಾಣ್ಯದ 2 ಮುಖಗಳು. ಅವರ ಹಣೆಬರಹ ಗೊತ್ತಿದೆ. ಅವರ ಸ್ವಂತ ಬಲದಿಂದ ಇಬ್ಬರೂ ಅಧಿಕಾರಕ್ಕೆ ಬರೋದಿಲ್ಲ ಅಂತ ಭವಿಷ್ಯ ನುಡಿದರು.
ದೇಶ ತಲೆತಗ್ಗಿಸುವಂತಹ ಪರಿಸ್ಥಿತಿ:  ಬಹು ವರ್ಷಗಳ ಪ್ರತ್ಯೇಕ ತೆಲಂಗಾಣ ಹೋರಾಟ ಇಷ್ಟು ಜಟಿಲವಾಗಲು ಮುಖ್ಯವಾಗಿ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ ಗೌಡರು, ಈಗಿನ ಎಲ್ಲಾ ಗೊಂದಲ ಮತ್ತು ಕ್ಲಿಷ್ಟಕರ ಬೆಳವಣಿಗೆ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷವೇ ಹೊರಬೇಕು ಎಂದ ಅವರು, ಕಳೆದ 2-3 ದಿನಗಳಿಂದ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸುತ್ತಿದ್ದೇನೆ. ಈ ಬೆಳವಣಿಗೆಯಿಂದ ದೇಶ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ನಾನಾ ಸದನಗಳಲ್ಲಿ ಜನಪ್ರತಿನಿಧಿಗಳು ದುಂಡಾವರ್ತಿ, ಗೂಂಡಾಗಿರಿ ಪ್ರದರ್ಶಿಸುತ್ತಿರುವ ಬಗ್ಗೆ ಅಸಮಾಧಾನ ಹಾಗೂ ಕಳವಳ ವ್ಯಕ್ತಪಡಿಸಿದ ಗೌಡರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಇದು ನಾಚಿಗೆಗೇಡಿನ ಬೆಳವಣಿಗೆ ಎಂದು ನುಡಿದರು.
ಹಾಸನದಿಂದಲೇ ಸ್ಪರ್ಧೆ:  ಫೆ.25 ರಂದು ದೆಹಲಿಯಲ್ಲಿ 11 ರಾಜಕೀಯ ಪಕ್ಷಗಳ ನಾಯಕರ ಸಭೆ ಕರೆಯಲಾಗಿದ್ದು, ಅಂದು ಮುಂದಿನ ರಾಜಕೀಯ ಹೋರಾಟದ ತೀರ್ಮಾನ ಅಂತಿಮವಾಗಲಿದೆ ಎಂದು ಗೌಡರು, ಬರುವ ಲೋಕಸಭೆ ಚುನಾವಣೆಯಲ್ಲಿ ತಾವು ಹಾಸನದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement