ಹೆದ್ದಾರಿಯಲ್ಲೇ ಶಾಲಾ ವಾಹನ ನಿಲುಗಡೆ: ಆತಂಕ
ಅರಸೀಕೆರೆ: ಪಟ್ಟಣದ ಖಾಸಗಿ ಶಾಲೆಯೊಂದರ ಆಡಳಿತವರ್ಗದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ಅಪಘಾತಕ್ಕೆ ಈಡಾಗುವ ಆತಂಕ ಮಕ್ಕಳ ಪೋಷಕರಲ್ಲಿ ಉಂಟಾಗಿದೆ.
ಇಲ್ಲಿನ ಮಿನಿವಿಧಾನ ಸೌಧ ಬಳಿಯಿರುವ ಸೆಂಟ್ಮೇರಿಸ್ ಶಾಲೆಯೇ ಇದಾಗಿದ್ದು, ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಇಂತಹ ಸನ್ನಿವೇಶ ಕಾಣಬಹುದಾಗಿದೆ. ಆಟೋಗಳಲ್ಲಿ ಬೆಳಿಗ್ಗೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುವ ಹಾಗೂ ಸಂಜೆ ಕರೆದೊಯ್ಯುವ ವಾಹನಗಳು ಸರತಿ ಸಾಲಿನಲ್ಲಿ ಈ ಶಾಲೆಯ ಎದುರು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಿಲ್ಲುತ್ತವೆ.
ಇಂತಹ ಸಮಯಗಳಲ್ಲಿ ರಭಸವಾಗಿ ಸಂಚರಿಸುವ ಭಾರಿ ವಾಹನಗಳಿಂದ ಅನಾಹುತಗಳು ಕಟ್ಟಿಟ್ಟ ಬುತ್ತಿ. ಹೀಗಾಗಿ ಪೋಷಕರಲ್ಲಿ ಆತಂಕ ಉಂಟಾಗಿದೆ. ಈ ಶಾಲೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ವಾಹನಗಳು ಮತ್ತು ಪೋಷಕರು ತಮ್ಮ ಸ್ವಂತ ವಾಹನ ರಸ್ತೆಯಲ್ಲಿಯೇ ನಿಲ್ಲಿಸಿಕೊಳ್ಳುವುದರಿಂದ ಅಪಘಾತವಾಗುವ ಸನ್ನಿವೇಶಗಳೇ ಹೆಚ್ಚಾಗಿವೆ.
ಹಿಂದಿನ ದಿನಗಳಲ್ಲಿ ಈ ಶಾಲೆಯ ಹಿಂಬದಿ ಗೇಟ್ ಮೂಲಕ ವಿದ್ಯಾರ್ಥಿಗಳು ಶಾಲೆಯಿಂದ ಹೊರಬಂದು ಹೋಗುತ್ತಿದ್ದರು. ಆದರೆ ಈಗ ಗೇಟ್ ಮುಚ್ಚಿರುವ ಕಾರಣ ಶಾಲೆ ಮುಭಾಗದ ಹೆದ್ದಾರಿಯಲ್ಲಿ ಶಾಲಾ ವಾಹನ ನಿಲ್ಲಿಸಿಕೊಳ್ಳಲಾಗುತ್ತಿದೆ. ಈ ಬೆಳವಣಿಗೆಯಿಂದ ಆತಂಕ ಎದುರಿಸುತ್ತಿರುವ ಪೋಷಕರು ಮತ್ತು ವಿದ್ಯಾರ್ಥಿಗಳ ಯೋಗಕ್ಷೇವುದ ಬಗ್ಗೆಯೂ ಶಾಲೆ ಆಡಳಿತ ಮಂಡಳಿ ಎಚ್ಚೆತ್ತು ಕಾರ್ಯಪ್ರವೃತ್ತವಾಗಬೇಕಾಗಿದೆ.ಇಲ್ಲದಿದ್ದಲ್ಲಿ ಅಮಾಯಕರ ಜೀವ ಹಾನಿಯಾದಲ್ಲಿ ಈ ಶಾಲೆಯ ಆಡಳಿತ ಮಂಡಳಿಯೇ ಜವಾಬ್ದಾರಿ ಹೊರಬೇಕಾಗುತ್ತದೆ.
ಈ ಹಿಂದೆ ಪುರಸಭಾಧ್ಯಕ್ಷರಾಗಿದ್ದ ಜಿ.ಟಿ.ಗಣೇಶ್ ಶಾಲೆಯ ಹಿಂಭಾಗದಿಂದ ವಿದ್ಯಾರ್ಥಿಗಳು ಹೋಗಲು ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರಾದರೂ ಭರವಸೆ ಈವರೆಗೂ ಈಡೇರಿಲ್ಲ. ಈಗಿನ ಅಧ್ಯಕ್ಷ ಮೋಹನ್ ಕುಮಾರ್ ಈ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
ಪಟ್ಟಣದ ಪೊಲೀಸ್ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಶಾಲೆಯ ಆಡಳಿತ ಮಂಡಳಿಗೆ ನೀಡ ಬೇಕಾಗಿದೆ.