ಕೌಶಲ್ಯ ದಿನಾಚರಣೆ: ವಾಸ್ತುಶಿಲ್ಪ, ಛಾಯಾಚಿತ್ರ ಪ್ರದರ್ಶನ
ಹಾಸನ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಸರ್ಕಾರಿ ವಸ್ತುಸಂಗ್ರಹಾಲಯ, ಹೇಮಾವತಿ ಮಹಿಳಾ ಸಂಘ ಇವರ ಸಹಯೋಗದೊಂದಿಗೆ ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಕೌಶಲ್ಯ ದಿನ ಆಚರಣೆ ಹಾಗೂ ವಾಸ್ತುಶಿಲ್ಪ, ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಕಲಾ ಕೌಶಲ್ಯ, ಸೃಜನಶೀಲ ಕೌಶಲ್ಯ, ಪಾಕ ಕೌಶಲ್ಯ, ನಿರ್ವಹಣಾ ಕೌಶಲ್ಯ ಹಾಗೂ ಕ್ರೀಡಾ ಕೌಶಲ್ಯ ಎಂಬ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಾ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿವೃತ್ತ ಅಧಿಕಾರಿ ಕೆ.ಎಸ್.ಎನ್. ಮೂರ್ತಿ ಮಾತನಾಡಿ, ದೇಶದ ಭವಿಷ್ಯವನ್ನು ಉಜ್ವಲವಾಗಿ ಕಟ್ಟಬೇಕಾಗಿರುವ ಯುವ ಪೀಳಿಗೆಯ ಶಕ್ತಿ ಇಂದು ದುರ್ಬಳಕೆ ಯಾಗುತ್ತಿದೆ. ಇದಕ್ಕೆ ಕಾರಣ ಅವರಿಗೆ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮನಸ್ಸು ಶುದ್ಧವಾಗಿರುವುದ ರಿಂದ ಸರಿಯಾದ ಮಾರ್ಗದರ್ಶನ ಸಿಕ್ಕಿದಲ್ಲಿ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯವಿದೆ. ಅಂತಹ ವ್ಯಕ್ತಿತ್ವವನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಸ್ಫೂರ್ತಿ ನೀಡಲಿ ಎಂದು ಆಶಿಸಿದರು.
ಆದರ್ಶನೀಯ: ಪತ್ರಕರ್ತ ರವಿ ನಾಕಲಗೂಡು ಮಾತನಾಡಿ, ಮನುಕುಲದ ಸಂಸ್ಕೃತಿ ಪ್ರಾರಂಭವಾಗುವುದೇ ಗ್ರಾಮೀಣ ಪ್ರದೇಶದಿಂದ.
ನಗರ ಸಂಸ್ಕೃತಿಯ ಕಬಂಧ ಬಾಹುಗಳಿಂದ ಈ ಸಂಸ್ಕೃತಿಯನ್ನು ನಾವು ರಕ್ಷಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೌಶಲ್ಯ ದಿನಾಚರಣೆಯ ಮೂಲಕ ಮೊಸಳೆ ಹೊಸಹಳ್ಳಿಯಂತಹ ಗ್ರಾಮೀಣ ಪ್ರದೇಶದ ಕಾಲೇಜೊಂದು ವಿದ್ಯಾರ್ಥಿಗಳಲ್ಲಿ, ಸಂಸ್ಕೃತಿಯನ್ನು ಬೆಳೆಸುವತ್ತ ತನ್ನನ್ನು ತೊಡಗಿಸಿಕೊಂಡಿರುವುದು ಅತ್ಯಂತ ಆದರ್ಶನೀಯ ಎಂದರು.
ಸತತ ಪ್ರಯತ್ನ: ಕಾಲೇಜಿನ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ ಮಾತನಾಡಿ, ಇಂದು ನಾವು ಕೇವಲ ಪರ್ಠಜ್ಞಾನದ ವಿದ್ಯಾರ್ಥಿಗಳನ್ನು ಸೃಷ್ಟಿಸುವುದಕ್ಕೆ ಬದಲು ಸಮಾಜ ಯೋಗ್ಯರಾಗುವಂತಹ ವ್ಯಕ್ತಿತ್ವಗಳನ್ನು, ಮನಸುಗಳನ್ನು ಸೃಜಿಸಬೇಕಿದೆ. ಆಗ ಮಾತ್ರ ಸಮಾಜ ಶುದ್ಧವಾಗಲು ಸಾಧ್ಯ. ಈ ದಿಸೆಯಲ್ಲಿ ಕಾಲೇಜು ಸತತ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.
ನಗರದ ಹೇಮಾವತಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾ ಶರ್ಮ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್. ದ್ಯಾವೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶೇಷಾದ್ರಿ, ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರೊ. ಅಂತೋನಿ ಮೇರಿ, ಹೇಮಾವತಿ ಮಹಿಳಾ ಸಂಘದ ಸದಸ್ಯರು, ಕಾಲೇಜಿನ ಎಲ್ಲ ಅಧ್ಯಾಪಕರು ಕಾರ್ಯಕ್ರಮದಲ್ಲಿ ಇದ್ದರು. ಸುನಂದಾ ಕೃಷ್ಣ ಪ್ರಾರ್ಥಿಸಿದರು, ಕನ್ನಡ ಉಪನ್ಯಾಸಕ ಕಾಂತರಾಜ್ ಸ್ವಾಗತಿಸಿದರು, ಕೃಪಾ ಪ್ರಭಾಕರ್ ವಂದಿಸಿದರು.
ವಿದ್ಯಾರ್ಥಿಗಳಾದ ಕಾವ್ಯ ಮತ್ತು ಅಭಿಲಾಷ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮೀಣ ತಿಂಡಿಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು.
ಮೊಸಳೆ ಹೊಸಹಳ್ಳಿ ಶಾಲಾ- ಕಾಲೇಜುಗಳ ಸುಮಾರು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ ನಾನಾ ವಸ್ತು ಪ್ರದರ್ಶನ ವೀಕ್ಷಿಸಿದರು.