ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾನಪದ ಎಲ್ಲ ಕಲೆಗೆ ತಾಯಿಬೇರು

Vishwanath S
Updated On : 22 Feb 2014, 11:04 am

ಹಾವೇರಿ: ಜಾನಪದ ಕಲೆ ಎಲ್ಲ ಕಲೆಗಳಿಗೂ ತಾಯಿಬೇರಿದ್ದಂತೆ. ಆದರೆ, ಆಧುನಿಕ ಭರಾಟೆಯಲ್ಲಿ ಇಂದು ಜಾನಪದ ಕಲೆ ಮರೆಯಾಗುತ್ತಿದೆ. ದೇಶದ ಪರಂಪರಾಗತ ಕಲೆಗಳಾದ ದೊಡ್ಡಾಟ, ಸಣ್ಣಾಟ, ವೀರಗಾಸೆಗಳು ಜನರಿಂದ ದೂರವಾಗುತ್ತಿವೆ ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿವಿಯ ಕುಲಸಚಿವ ಡಾ. ಡಿ.ಬಿ. ನಾಯಕ ಅಭಿಪ್ರಾಯಪಟ್ಟರು. ನಗರದ ಹೊಸಮಠವು ಲಿಂ. ಜಗದ್ಗುರು ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಅಥಣಿ ಮುರುಘೇಂದ್ರ ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶುಕ್ರವಾರ ಜಾನಪದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪೂರ್ವಜರು ಜಾನಪದವನ್ನು ಸಮಸೃಷ್ಟಿ ಸಂಸ್ಕೃತಿಯ ಮೂಲಕ ಕಟ್ಟಿ ಬೆಳೆಸಿದರು. ಕುಟ್ಟುವ, ಬೀಸುವ ಕ್ರಿಯೆಯ ಸಮಯದಲ್ಲಿ ಜನ್ಮ ತಾಳಿದಂತಹ ಜಾನಪದ ಕಲೆಗಳು ಯಂತ್ರಗಳ ಪ್ರವೇಶದಿಂದ ಇಂದು ಜನಮಾನಸದಿಂದ ಮರೆಯಾಗುತ್ತಿವೆ. ನಮ್ಮ ದೇಶದ ಅನ್ಯೋನ್ಯತೆಯನ್ನು ಸಾರುವಂತಹ ಕಲೆಗಳಾದ ಯಕ್ಷಗಾನ, ವೀರಗಾಸೆ, ದೊಡ್ಡಾಟ, ಸಣ್ಣಾಟ, ಬಯಲಾಟ ಸೇರಿದಂತೆ ಜಾನಪದದ ವಿವಿಧ ಕಲೆಗಳು ಸಮಾಜದಿಂದ ಹಿಂದೆ ಸರಿಯುತ್ತಿವೆ. ಈ ಕಲೆಗಳನ್ನು ಉಳಿಸಿ ಬೆಳೆಸಬೇಕಾದುದು ಅವಶ್ಯಕವಾಗಿದೆ ಎಂದು ಹೇಳಿದರು.
ಕರಾವಳಿ ಪ್ರದೇಶದಲ್ಲಿ ಯಕ್ಷಗಾನವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಿದ್ದಾರೆ. ಆದ್ದರಿಂದ ಈ ಕಲೆ ಇಂದಿಗೂ ಅಲ್ಲಿ ಜೀವಂತವಾಗಿದೆ. ಉತ್ತರ ಕರ್ನಾಟಕದ ಜನತೆ ಪ್ರಮುಖ ಜಾನಪದ ಕಲೆಗಳನ್ನು ಆಚಾರ ವಿಚಾಗಳನ್ನು, ವೇಷ ಭೂಷಣಗಳನ್ನು ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕಾದ ಕಾಲ ಇದಾಗಿದೆ. ಒಂದು ದೇಶದ ಪ್ರಗತಿಯನ್ನು ಕೇವಲ ಆರ್ಥಿಕ ಅಭಿವೃದ್ಧಿಯಿಂದ ಅಳೆಯದೇ ಆ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ, ಚಿತ್ರಕಲೆ, ಸಾಂಸ್ಕೃತಿಕ ಪ್ರಗತಿ ಪರಿಗಣಿಸಬೇಕು. ಅನೇಕ ಸಂಪತ್ತನ್ನು ಗಳಿಸಬಹುದು. ಆದರೆ, ಕಲಾ ಸಂಪತ್ತನ್ನು ಎಲ್ಲರೂ ಗಳಿಸಿಕೊಳ್ಳಲು ಸಾಧ್ಯವಿಲ್ಲ. ಅದೊಂದು ಸಾಧನೆ ಎಂದರು.
ಸವಣೂರಿನ ದೊಡ್ಡ ಹುಣಸೆಕಲ್ಮಠದ ಚನ್ನಬಸವ ಶ್ರೀಗಳು, ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಬಿ.ಸಿ. ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಸಾಹಿತಿ ಶ್ರೀಶೈಲ ಹುದ್ದಾರ, ಶಂಕರ ಬಿರಾದಾರ, ಸಾಗರ ಎಸ್.ವಾಲಿ ಇತರರು ಇದ್ದರು. ಸಂಜೀವಕುಮಾರ ನೀರಲಗಿ ಸ್ವಾಗತಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement