ನಾಟಕೋತ್ಸವ, ವಿಜ್ಞಾನೋತ್ಸವ
ಅರಸೀಕೆರೆ: ಪಟ್ಟಣದ ಅರಸೀ ಸಾಂಸ್ಕತಿಕ ವೇದಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ವಿಚಾರ ಸಂಕಿರಣ, ನಾಟಕೋತ್ಸವ ಹಾಗೂ ವಿಜ್ಞಾನೋತ್ಸವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಅರಸೀ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಮಮತಾ ತಿಳಿಸಿದ್ದಾರೆ. ಫೆ. 22ರ ಭಾನುವಾರ ಬೆಳಗ್ಗೆ ಗಿರೀಶ್ ಕಾರ್ನಾಡರ ನಾಟಕಗಳ ಪ್ರಸ್ತುತತೆ ಕುರಿತಂತೆ ಆನಂದ್ ಋಗ್ವೇದಿ ವಿಚಾರ ಮಂಡಿಸಿದರೆ ವಿ.ಕೃ. ಗೋಕಾಕ್ ಅವರ ನಾಟಕಗಳ ಕುರಿತು ಡಿ.ಎಸ್. ರಾಮಸ್ವಾಮಿ ವಿಚಾರ ವಿನಿಮಯ ನಡೆಸಲಿದ್ದಾರೆ. ಅಂದು ಸಂಜೆ ಗಸ್ತಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಖ್ಯಾತ ಕಿರುತೆರೆಯ ನಿರ್ದೇಶಕ ಟಿ.ಎನ್. ಸೀತಾರಾಂ ಸೇರಿದಂತೆ ಕಿರುತೆರೆಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಫೆ. 23ರಂದು ಬೆಳಗ್ಗೆ 8ಕ್ಕೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ, ಬಹುಮಾಧ್ಯಮಗಳ ರಸಪ್ರಶ್ನೆ, ಭಾಷಣ ಸ್ಪರ್ಧೆ, ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿದ್ದು ಅಂದು ಸಂಜೆ ಪ್ರಸಾದ್ ರಕ್ಷಿಧಿ ನಿರ್ದೇಶನದ ಚಂದ್ರಮಂಡಲ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಕೇಶವಮೂರ್ತಿ ವಹಿಸಲಿದ್ದು ಹಲವು ಮುಖಂಡರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂದು ಬಿಜೆಪಿಯಲ್ಲಿ ಕೆಜೆಪಿ ವಿಲೀನ
ಅರಕಲಗೂಡು: ತಾಲೂಕು ಕರ್ನಾಟಕ ಜನತಾ ಪಕ್ಷ ತಾಲೂಕಿನಲ್ಲಿ ವಿದ್ಯುಕ್ತವಾಗಿ ಶನಿವಾರ ಭಾರತೀಯ ಜನತಾ ಪಕ್ಷದಲ್ಲಿ ವಿಲೀನಗೊಳ್ಳಲಿದೆ ಎಂದು ಕೆಜೆಪಿ ಮುಖಂಡ ಎನ್. ರವಿಕುಮಾರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಬಿ.ಎಸ್. ಯಡಿಯೂರಪ್ಪ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ತೆಗೆದುಕೊಂಡ ನಿರ್ಣಯದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿಯೂ ಕೆಜೆಪಿ ಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಾಗಿದೆ. ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಮುಖಂಡರುಗಳಾದ ಷಡಾಕ್ಷರಿ, ಗುರಪ್ಪ, ಜಗದೀಶ್ ಇತರರು ಉಪಸ್ಥಿತರಿದ್ದರು.
ಪರಿಶೀಲನೆ
ಅರಕಲಗೂಡು: ಹಾಸನ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ಕೆ.ಆರ್.ಪಲ್ಲವಿ ಇಲ್ಲಿನ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ನಂತರ ಪಟ್ಟಣದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ನಡೆದಿರುವ ಐದು ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಕಾಮಗಾರಿಗಳ ಗುಣಮಟ್ಟದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಗುಣಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೆ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವಂತೆ ಸಲಹೆ ಇತ್ತರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ಬಾಬು, ಎಂಜಿನಿಯರ್ ಕೆ.ಆರ್.ಕವಿತ ಇದ್ದರು.