ರೈತನ ಪ್ರಶ್ನೆಗೆ ಉತ್ತರಿಸಲು ಶಿವರಾಂ ಸುಸ್ತೋ ಸುಸ್ತು
ಅರಸೀಕೆರೆ: ತಮ್ಮ ಕಾಂಗ್ರೆಸ್ ಸರ್ಕಾರ 40 ವರ್ಷಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದೆ. ಈ ಅವಧಿಯಲ್ಲಿ ಜಿಲ್ಲೆಗೆ ಯಾವ ಯಾವ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೀರಿ. ತಾವೇ ನಾಲ್ಕು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಏನು ಸಾಧನೆ ಮಾಡಿದ್ದೀರಿ ನೀರಾವರಿ ಯೋಜನೆಗಳ ಅನುಷ್ಠಾನ ಸಂಬಂಧ ಏಕೆ ಆಗ ಪ್ರಶ್ನಿಸಲಿಲ್ಲ ಎಂದು ರೈತರೊಬ್ಬರು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡ ಬಿ. ಶಿವರಾಂ ಅವರನ್ನು ಆಕ್ಷೇಪಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ರೈತರ ಆಹೋರಾತ್ರಿ ಧರಣಿ ಸತ್ಯಾಗ್ರಹ ಬೆಂಬಲ ಸೂಚಿಸಿ ಗೌಡರ ವಿರುದ್ಧ ಮಾತನಾಡುವ ವೇಳೆ ರೈತರೊಬ್ಬರು ಕೇಳಿದ ಪ್ರಶ್ನೆಯಿಂದ ಬಿ. ಶಿವರಾಂ ತಬ್ಬಿಬ್ಬಾದ ಪರಿಸ್ಥಿತಿ ಎದುರಾಗಿತ್ತು.
ನಂತರ ಮಾತನಾಡಿ, ತಾವು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರಲಿಲ್ಲ. ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಜಿಲ್ಲೆಗೆ ಯಾವುದೇ ಯೋಜನೆ ಅನುಷ್ಟಾನಕ್ಕೆ ತರಲು ಯತ್ನಿಸಿದರೂ ಅದಕ್ಕೆ ದೇವೇಗೌಡರ ಕುಟುಂಬ ಅಡ್ಡಗಾಲು ಹಾಕುತ್ತಿದ್ದರು ಎಂದು ಹೇಳಿದರು.
ಗೌಡರ ಕುಟುಂಬವೇ ಕಾರಣ: ಜಿಲ್ಲೆ ನೀರಾವರಿ ಯೋಜನೆಗಳಿಂದ ವಂಚಿತವಾಗಲು ದೇವೇಗೌಡರ ಕುಟುಂಬ ರಾಜಕಾರಣವೇ ಕಾರಣ. ಜಿಲ್ಲೆಯಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾದರೂ ಅಡ್ಡಿಪಡಿಸಿದ್ದೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಅವರ ಮಕ್ಕಳು. ಈಗ ಇತರರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಡಳಿತಾವಧಿಯಲ್ಲಿ ಹೊನವಳ್ಳಿ ಏತ ನೀರಾವರಿ, ಕಾಚೇನಹಳ್ಳಿ ಏತ ನೀರಾವರಿ ಟೆಂಡರ್ ಕರೆಯಲಾಗಿತ್ತು. ಅನೇಕ ನೀರಾವರಿ ಸೇರಿದಂತೆ ಇತರೆ ಯೋಜನೆಗಳನ್ನು ದೇವೇಗೌಡರು ಮತ್ತು ಅವರ ಮಕ್ಕಳು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಅವರ ಬಹುದೊಡ್ಡ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದು ಇದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಿದರೂ ಸಮಸ್ಯೆ ಬಗೆ ಹರಿಯಲು ಸಾಧ್ಯವಿಲ್ಲ. ಹಾಗಾಗಿ ನೀರಾವರಿ ಸಚಿವರು ಸ್ಥಳಕ್ಕೆ ಆಗಮಿಸಿದರೆ ಮಾತ್ರ ತಮ್ಮ ಸಮಸ್ಯೆಗೆ ಪರಿಹಾರ ದೊರಕಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಟೇಲ್ ಶಿವಪ್ಪ, ವಿಜಯ್ ಕುಮಾರ್, ಪುರಸಭೆ ಸದಸ್ಯ ಉಮಾಶಂಕರ್ ಹಾಗೂ ಇತರರು ಇದ್ದರು.