ಹೊಂದಾಣಿಕೆ ರಾಜಕಾರಣದಿಂದ ಜಿಲ್ಲೆಯ ಅಭಿವೃದ್ಧಿ ಮರೀಚಿಕೆ
ಅರಕಲಗೂಡು: ಹಾಲಿ ಮಾಜಿ ಶಾಸಕರ ಹೊಂದಾಣಿಕೆ ರಾಜಕಾರಣದಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದು, ತಾಲೂಕಿನ ಜನರನ್ನು ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ ಎಂದು ಪೊಟೇಟೋ ಕ್ಲಬ್ನ ಸಂಸ್ಥಾಪಕ ಅಧ್ಯಕ್ಷ ಯೋಗಾ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಚನ್ನಬಸವೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಕೃತಜ್ಞತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 30 ವರ್ಷಗಳಿಂದಲೂ ಶಾಸಕ ಎ. ಮಂಜು ಮತ್ತು ಎ.ಟಿ. ರಾಮಸ್ವಾಮಿ ಅವರು ಅನೈತಿಕ ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಪರಸ್ಪರ ಅಧಿಕಾರ ಹಂಚಿಕೊಳ್ಳುವ ಇವರು ತಮ್ಮ ಸ್ವಾರ್ಥದ ಅಭಿವೃದ್ಧಿಗೆ ಕ್ಷೇತ್ರವನ್ನು ಬಲಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಶಾಸಕ ಎ. ಮಂಜು ಅಧಿಕಾರಕ್ಕೆ ಬಂದಾಗ, ರಾಮಸ್ವಾಮಿ ಪ್ರತಿರೋಧಿಸದೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ರಾಮಸ್ವಾಮಿ ಅಧಿಕಾರಕ್ಕೆ ಬಂದಾಗ ಎ. ಮಂಜು ಹೊಂದಾಣಿಕೆ ಮಾಡಿಕೊಂಡು ತಮ್ಮ ಬೊಕ್ಕಸ ತುಂಬಿಕೊಳ್ಳಲು ಮುಂದಾಗುತ್ತಾರೆ. ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಅಧಿಕಾರಿಗಳು ಮತ್ತು ಶಾಸಕರು ಮನಬಂದಂತೆ ಆಡಳಿತ ನಡೆಸುತ್ತಾ ಬಂದಿದ್ದಾರೆ. ಆದರೆ ಇನ್ನು ಮುಂದೆ ಇಂತಹ ಅವ್ಯವಹಾರಗಳ ವಿರುದ್ಧ ಪೊಟೇಟೋ ಕ್ಲಬ್ ವಿರೋಧ ಪಕ್ಷವಾಗಿ ಕರ್ತವ್ಯ ನಿರ್ವಹಿಸುತ್ತದೆ ಎಂದರು.
ಮಂತ್ರಿಗಿರಿ ಕನಸು: ಶಾಸಕ ಎ. ಮಂಜು ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾಗಿ 8 ತಿಂಗಳೂ ಕಳೆದರು ಕ್ಷೇತ್ರ ಅಭಿವೃದ್ಧಿಯ ಕಡೆ ಗಮನ ನೀಡದೆ ತನ್ನ ಮಂತ್ರಿಯ ಸ್ಥಾನವನ್ನ ಗಿಟ್ಟಿಸಿಕೊಳ್ಳಲು ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ತನ್ನ ಮಂತ್ರಿ ಸ್ಥಾನದ ಕನಸನ್ನ ಬಿಟ್ಟು ರೈತ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.
ಗಾಳಿಸುದ್ದಿಗೆ ಕಿವಿಗೊಡದಿರಿ: ಕ್ಷೇತ್ರದಲ್ಲಿ ಈಗಾಗಲೇ ಯೋಗಾ ರಮೇಶ್ ಬೆಂಗಳೂರಿನಲ್ಲೇ ಜೆಡಿಎಸ್ ಪಕ್ಷ ಸೇರಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ. ಇದು ಸತ್ಯಕ್ಕೆ ದೂರವಾದುದು ಎಂದರು.
ಕೀಳು ರಾಜಕೀಯ: ಕಾರ್ಯಕ್ರಮದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅದ್ಯಕ್ಷ ಮುತ್ತಿಗೆ ರಾಜೇಗೌಡ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯೋಗಾರವುಶ್ 32,477 ಮತಗಳನ್ನು ಗಳಿಸಿದ್ದಾರೆ ಎಂದು ಅಧಿಕೃತ, ಆದರೆ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಪಕ್ಷಗಳು ಯೋಗಾ ರಮೇಶ್ರವರ ಸ್ಪರ್ಧೆಯ ಬಗ್ಗೆ ಭಯಪಟ್ಟು ಯೋಗಾ ರಮೇಶ್ ಅವರ ಹೆಸರಿಗೆ ಹೊಂದಾಣಿಕೆಯಾಗುವಂತೆ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕೀಳು ರಾಜಕಾರಣ ಮಾಡಿದ ಪರಿಣಾಮ ಕ್ಷೇತ್ರಕ್ಕೆ ಪರಿಚಯವಿಲ್ಲದೆ, ಕ್ಷೇತ್ರಕ್ಕೆ ಮುಖವನ್ನೇ ತೋರಿಸದ ಈ ಪಕ್ಷೇತರ ಅಭ್ಯರ್ಥಿಗಳು 6 ಸಾವಿರಕ್ಕೂ ಅಧಿಕ ಮತಗಳನ್ನ ಪಡೆದಿದ್ದರು. ಈ ಮತಗಳು ಯೋಗಾರವುಶ್ ಅವರದ್ದೇ ಎಂದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜೀ ಅಧ್ಯಕ್ಷ ಹೆಚ್. ಮಾದೇಶ್, ಪೊಟೇಟೋ ಕ್ಲಬ್ ಮುಖಂಡರುಗಳಾದ ಬೇಲೂರೇಗೌಡ, ವಾಸಿಂ, ಚನ್ನಕೇಶವೇಗೌಡ, ವಾಟಾಳ್ ರಮೇಶ್, ಹಾಗೂ ಶಶಿಕುಮಾರ್ ಸಭೆಯನ್ನ ಉದ್ದೇಶಿಸಿ ಮಾತನಾಡಿದರು. ವೆಧಿಕೆಯಲ್ಲಿ ವಕೀಲರಾದ ಜಯಪ್ಪ, ಸತ್ಯನಾರಾಯಣ್, ಮಂಜುನಾಥ್ ಹಾಗೂ ಮುಖಂಡರಾದ ತಾಜೀಂಪಾಷ, ಅಜಿತ್, ರಾಜೇಂದ್ರ ಮೊದಲಾದವರು ಭಾಗವಹಿಸಿದರು.
ಸಭೆಗೂ ಮುನ್ನ ವಿಜ್ಞಾನಿ ಪ್ರಭುಲ್ ಚಂದ್ರ ಮತ್ತು ವಿದ್ವಾನ್ ಆರ್.ಕೆ. ಶೀಕಂಠನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.