ಸುದ್ದಿ ಸಂಕ್ಷೇಪ
ಶಿಕ್ಷಕರ ಜ್ಯೇಷ್ಠತಾ ಪಟ್ಟಿ ಪ್ರಕಟ
ಹಾಸನ: 2011ರ ಜ. 1ರಿಂದ 2013ರ ಡಿ. 31ರವರೆಗೆ ನೇಮಕಾತಿ, ನೇರ ನೇಮಕಾತಿ, ಬಡ್ತಿ, ವರ್ಗಾವಣೆ ಪಡೆದು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಸಹ ಶಿಕ್ಷಕರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಎಲ್ಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳಿದ್ದಲ್ಲಿ ಬಾಧಿತ ಶಿಕ್ಷಕರು ಆಕ್ಷೇಪಣೆಗಳನ್ನು ಅಧಿಕೃತ ದಾಖಲೆಗಳೊಂದಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಫೆ. 25 ರೊಳಗೆ ಸಲ್ಲಿಸಲು ತಿಳಿಸಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಿ.ಆರ್. ಬಸವರಾಜ ತಿಳಿಸಿದ್ದಾರೆ.
'ಎತ್ತಿನ ಹೊಳೆಯಲ್ಲಿ ಆದ್ಯತೆ ನೀಡಿ'
ಹಾಸನ: ಎತ್ತಿನಹೊಳೆ ಏತ ನೀರಾವರಿಯ ಯೋಜನೆಯಲ್ಲಿ ಹೊಳೆಯು ಹಾಸನ ಜಿಲ್ಲೆಯಲ್ಲೇ ಪ್ರಾರಂಭವಾಗಿ ದಕ್ಷಿಣ ಕನ್ನಡ, ಉಡುಪಿ ಮುಖಾಂತರ ಸಮುದ್ರ ಸೇರುತ್ತದೆ. ಈ ಏತ ನೀರಾವರಿಯಿಂದ ತುಮಕೂರು, ಬೆಂಗಳೂರು, ಕೋಲಾರ ಜಿಲ್ಲೆಗಳಿಗೆ ನೀರೊದಗಿಸುವ ಪ್ರಸ್ತಾಪವಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಜಿಲ್ಲೆಯ ಬಹುತೇಕ ಕೃಷಿಯು ಮಳೆ ಅವಲಂಬಿತವಾಗಿದ್ದು, ಈ ಯೋಜನೆಯಿಂದ ಜಿಲ್ಲೆಯ ರೈತರಿಗೆ ಅನುಕೂಲ ಒದಗಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಂ ವಿಧಾನ ಪರಿಷತ್ತಿನಲ್ಲಿ ಮನವಿ ಮಾಡಿದರು.
ಶೇ. 100ರಷ್ಟು ಫಲಿತಾಂಶ
ಹಾಸನ: ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ನಡೆದಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ನೂರಕ್ಕೆ ನೂರು ಫಲಿತಾಂಶವನ್ನು ಪಡೆದಿದೆ.
ಬಿ.ಎ. ಹಾಗೂ ಬಿ.ಕಾಂ. ವಿಭಾಗಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅರಸೀಕೆರೆ ತಾಪಂ ಅಧ್ಯಕ್ಷ ಸ್ಥಾನ ತೆರವು
ಹಾಸನ: ಅರಸೀಕೆರೆ ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿದ್ದ ಎಚ್.ಟಿ. ಶಿವಮೂರ್ತಿ ಅವರು ಅಧ್ಯಕ್ಷ ಸ್ಥಾನಕ್ಕೆ ಫೆ. 3ರಂದು ರಾಜಿನಾಮೆಯನ್ನು ಸಲ್ಲಿಸಿದ್ದರು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ಪ್ರಕರಣ 140ರಂತೆ ನಿಗದಿತ ಅವಧಿಯಲ್ಲಿ ಇವರು ರಾಜೀನಾಮೆ ವಾಪಸ್ಸು ಪಡೆಯದ ಕಾರಣ, ಇವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಇದರಿಂದಾಗಿ ತೆರವಾದ ಈ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಉಪ ವಿಭಾಗಾಧಿಕಾರಿ ಹಾಸನ ರವರಿಗೆ ನಿರ್ದೇಶಿಸಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.