ಅಂಗವಿಕಲರಿಗೆ ವ್ಯವಸ್ಥಿತವಾಗಿ ಗುರುತಿನ ಚೀಟಿ: ಸಚಿವೆ ಉಮಾಶ್ರೀ
ಹಾಸನ: ಅಂಗವಿಕಲರ ಗುರುತಿನ ಚೀಟಿಯನ್ನು ವ್ಯವಸ್ಥಿತವಾಗಿ ನೀಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಮಟ್ಟದ ವೈದ್ಯಕೀಯ ಪ್ರಾಧಿಕಾರ, ಜಿಲ್ಲಾ ಮಟ್ಟದ ವೈದ್ಯಕೀಯ ಪ್ರಾಧಿಕಾರ ಹಾಗೂ ಬೆಂಗಳೂರು ವೈದ್ಯಕೀಯ ಪ್ರಾಧಿಕಾರದ ಮೂಲಕ ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕತಿ ಸಚಿವೆ ಉಮಾಶ್ರೀ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು ವಿಧಾನ ಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಿವೇಶನ ಹಂಚಿಕೆ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ವಿಕಲಚೇತನರಿಗೆ ನಿವೇಶನ ನೀಡುವ ಬಗ್ಗೆ ಮೀಸಲಾತಿ ಕಲ್ಪಿಸಿರುವುದಿಲ್ಲ. ಆದರೆ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ವಸತಿ ಯೋಜನೆಗೆ ನಿಗದಿಪಡಿಸಿರುವ ಗುರಿಯಲ್ಲಿ ಶೇ. 5ರಷ್ಟನ್ನು ವಿಕಲಚೇತನರಿಗೆ ನಿಗದಿಪಡಿಸಿದೆ ಎಂದು ಸಚಿವರು ತಿಳಿಸಿದರು.
ಶಿಸ್ತು ಕ್ರಮ: ವಿಕಲಚೇತನರ ಸುಳ್ಳು ಗುರುತಿನ ಚೀಟಿಯನ್ನು ಪಡಿದಿರುವುದು ಕಂಡುಬಂದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಂಡು, ಪ್ರಕರಣವನ್ನು ಸಹ ದಾಖಲಿಸಲಾಗುವುದೆಂದು ತಿಳಿಸಿದರು.
ದೇವರಾಜ ಅರಸ್ ಹಿಂದುಳಿದ ವರ್ಗಗಳ ನಿಗಮದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿಯಲ್ಲಿ ಹಿಂದುಳಿದ ವರ್ಗದ ವಿಕಲಚೇತನರಿಗೆ ಶೇ. 3ರಿಂದ ಶೇ. 5ರಷ್ಟು ಮೀಸಲಾತಿ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆಂದು ಸಚಿವರು ತಿಳಿಸಿದರು.