ಅಕ್ಕನ ಅಂಗಡಿಯಲ್ಲೇ ಮಾಲು ಕದ್ದು ಮಾರುತ್ತಿದ್ದ ತಮ್ಮ!
ಸಕಲೇಶಪುರ: ಅಕ್ಕನ ಬಟ್ಟೆಅಂಗಡಿಯಿಂದ ಲಕ್ಷಾಂತರ ಮೌಲ್ಯದ ಸಿದ್ಧ ಉಡುಪುಗಳನ್ನು ಕದ್ದು ಪಟ್ಟಣದಲ್ಲಿ ವ್ಯಾಪಾರ ಮಾಡುತ್ತಿದ್ದ ತಮ್ಮನನ್ನು ಪೊಲೀಸರು ಬಂಧಿಸಿದ ಘಟನೆ ಶನಿವಾರ ಪಟ್ಟಣದ ಹಳೇಸಂತವೇರಿ ಬಡಾವಣೆಯಲ್ಲಿ ನಡೆದಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ವಲಯ ಅರಣ್ಯಾದಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹನುಮಂತಪ್ಪ ಎಂಬವರ ಪತ್ನಿ ಜ್ಯೋತಿ ಎಂಬುವವರ ಒಡೆತನದಲ್ಲಿ ಚಿಕ್ಕಮಗಳೂರು ನಗರದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಶ್ರೀ ಗಾರ್ಮೆಂಟ್ಸ್ ಎಂಬ ಸಿದ್ಧಉಡುಪಿನ ಅಂಗಡಿಯನ್ನು ಜ್ಯೋತಿ ತನ್ನ ತಮ್ಮ ರಾಜವರ್ಧನ್ ಸಹಕಾರದಿಂದ ಅಂಗಡಿ ನಡೆಸುತ್ತಿದ್ದು ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆ ತಲೆದೋರಿತ್ತು.
ಆದ್ದರಿಂದ ರಾಜವರ್ಧನ್ ಅಂಗಡಿಯಲ್ಲಿದ್ದ ಸಿದ್ಧ ಉಡುಪುಗಳ ಸೇರಿದಂತೆ ಕಾರ್ಖಾನೆಯಿಂದ ಅಂಗಡಿಗೆ ಬರಬೇಕಿದ್ದ ವಸ್ತುಗಳನ್ನು ಬೇರೆಡೆ ಸಾಗಿಸಿ ಪಟ್ಟಣದಲ್ಲಿ ಹಳೇಸಂತವೇರಿ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಪಡೆದು ಬಚ್ಚಿಡಲಾಗಿತ್ತು. ಈ ಬಗ್ಗೆ ತಮ್ಮನ ವಿರುದ್ಧವೇ ವಂಚನೆ ದೂರನ್ನು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಿಸಲಾಗಿತ್ತು. ಈ ಸಂಬಂಧ ಪಟ್ಟಣಕ್ಕೆ ಆಗಮಿಸಿದ್ದ ಚಿಕ್ಕಮಗಳೂರು ಠಾಣೆ ಪೊಲೀಸರು ಮಹೇಶ್ವರಿನಗರ ಬಡಾವಣೆಯ ಮನೆಯನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಲಕ್ಷಾಂತರ ಮೌಲ್ಯದ ಸಿದ್ಧ ಉಡುಪುಗಳು ಪತ್ತೆಯಾಗಿವೆ.