ಅಳಿವಿನಂಚಿನಲ್ಲಿರುವ ಪ್ರಾಕೃತ ಭಾಷೆ ಉಳಿವಿಗಾಗಿ ಹಲವು ಕಾರ್ಯಕ್ರಮ
ಚನ್ನರಾಯಪಟ್ಟಣ: ಪ್ರಾಕೃತ ಭಾಷೆ ಅಳಿವಿನಂಚಿನಲ್ಲಿದ್ದು, ಅದನ್ನು ಉಳಿಸುವ ಸಲುವಾಗಿ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಶ್ರವಣಬೆಳಗೊಳದ ಚಾವುಂಡರಾಯ ವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಾಕೃತ ರತ್ನ ಪದವೀಧರರ ಸಮಾವೇಶದಲ್ಲಿ ಆಶೀರ್ವಚಿಸಿ ಪ್ರಾಚೀನ ಭಾಷೆಯಾದ ಪ್ರಾಕೃತವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿನ ಪ್ರಾಕೃತ ಅಧ್ಯಯನ ಕೇಂದ್ರ ಪ್ರಾಕೃತ ಪ್ರವೇಶ, ಉತ್ತಮ, ಮಧ್ಯಮ, ವಿಶಾರದ ಹಾಗೂ ಎರಡು ವರ್ಷದ ಪ್ರಾಕೃತ ರತ್ನ ಕೋರ್ಸ್ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
2004ರಲ್ಲಿ ಪ್ರಾರಂಭವಾಗಿರುವ ಪ್ರಾಕೃತ ಅಧ್ಯಯನ ಕೇಂದ್ರ 4500 ವಿದ್ಯಾರ್ಥಿಗಳಿಗೆ ಪ್ರಾಕೃತ ಪರಿಕ್ಷೆಗಳ ಪ್ರವೇಶಾತಿ ನೀಡಿದ್ದು, ಕೋರಿಕೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಭಾಷೆಯ ಅಭಿವೃದ್ಧಿ ಪಡಿಸಲು ಶ್ರಮಿಸಿದೆ ಎಂದು ತಿಳಿಸಿದರು.
ಪ್ರಾಕೃತ ಭಾಷೆಯಲ್ಲಿ ಎಂಎ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಾಕೃತ ಬಿಇಡಿ ಪರಿಕ್ಷೆಯಲ್ಲಿ ಪ್ರವೇಶವನ್ನು ಕೋರುತ್ತಿದ್ದು, ರತ್ನ ಪರಿಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಎಂಎ ಪದವಿಗೆ ಅವಕಾಶ ನೀಡಬೇಕು. ಈ ಸಂಬಂಧ ಸರ್ಕಾರ ಅನುಮತಿ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಪ್ರಾಕೃತ ರತ್ನ ಸಮಾವೇಶ: ಪ್ರಾಕೃತ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾಲಯ ಹಾಗೂ ಕ್ಷೇತ್ರದ ಪ್ರಾಕೃತ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಪ್ರಾಕೃತ ರತ್ನ ಪದವೀಧರರ ಸಮಾವೇಶ ನಡೆಸುವ ಚಿಂತನೆ ನಡೆದಿದ್ದು, ಈ ಸಂಬಂದ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಉದ್ಯೋಗವಕಾಶ: ಪ್ರಾಕೃತ ಭಾಷೆಯನ್ನು ಅಧ್ಯಯನ ಮಾಡಿ, ಪದವಿ ಪಡೆದವರು ತಮ್ಮ ಪ್ರಾಕೃತ ಅಧ್ಯಯನ ಕೇಂದ್ರ ಅಥವಾ ಇತರೆಡೆಗಳಲ್ಲಿ ಪ್ರಾಕೃತ ಕೇಂದ್ರಗಳಲ್ಲಿ ಉದ್ಯೋಗ ಅಪೇಕ್ಷಿಸಿದರೆ ಅವರಿಗೆ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ವ್ಯವಸ್ಥೆ ನೀಡಲಾಗುವುದು ಎಂದು ತಿಳಿಸಿದರು.
ಸಾಹಿತಿ ಹಂಪನಾ ಮಾತನಾಡಿ, ಪ್ರಾಕೃತ ಪ್ರಾಚೀನ ಭಾಷೆಯಾಗಿದ್ದು, ಇದು ಸಂಸ್ಕೃತಕ್ಕೂ ಮೊದಲು ಜನಸಾಮಾನ್ಯರ ಭಾಷೆಯಾಗಿರುವ ಬಗ್ಗೆ ಕುರುಹುಗಳಿದ್ದು, ಅಳಿವಿನಂಚಿನಲ್ಲಿರುವ ಪ್ರಾಕೃತವನ್ನು ನಾವಿಂದು ಉಳಿಸಿ ಬೆಳಸಬೇಕಾಗಿದೆ ಎಂದು ತಿಳಿಸಿದರು.
ಪ್ರಾಕೃತದಲ್ಲಿ ರತ್ನ ಪದವಿ ಪಡೆದೆ ವಿದೇಶಿ ವಿದ್ಯಾರ್ಥಿಗಳಾದ ಸೂಕಿ ಜೋಹನ್ನ ಥೆರೆಸಾ, ಪೋಲ್ಲರ್ ರಿವೇನ್, ಲೆನುವೆತ್ತೆ ನದಿನೆ, ಕ್ಲಿಮಸ್ಝೆವೆಸ್ಕಿ ಡೊಮಿನಿಕಾ, ನೊವೆಡಝಕಿ ಕ್ಲಾಸ್ಜಿ. ಬೆಂಜಮಿನ್ ಹಾಗೂ ಸ್ಕೂಝರ್ ಜೋಹನ್ಸ್ ಅವರಿಗೆ ಕ್ಷೇತ್ರದ ವತಿಯಿಂದ ಸಾಹಿತಿ ಕಮಲಾಹಂಪನಾ ಸನ್ಮಾನಿಸಿದರು.
ಪ್ರಾಕೃತ ವಿದ್ಯಾಪೀಠದ ಟ್ರಸ್ಟಿ ಪ್ರೇಮ್ ಸಮನ್ ಜೈನ್, ಕಾರ್ಯಾಧ್ಯಕ್ಷ ಇಂದ್ರಕುಮಾರ್ ಪ್ರಭಾರ ನಿರ್ದೇಶಕ ಬಿ.ಎಸ್. ಸಣ್ಣಯ್ಯ ಹಾಗೂ ಮಂಜಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.