'ಕನ್ನಡ ಭಾಷೆ ಸಂಸ್ಕೃತಿಯ ಪ್ರತೀಕ'
ಹಾಸನ: ಹಲವಾರು ಭಾಷೆಗಳ ಪದಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡು ವಿಶಾಲವಾದ ಮನೋಭೂಮಿಕೆಯನ್ನು ಹೊಂದಿ, ಸ್ವತಂತ್ರವಾದ ಅಸ್ತಿತ್ವವನ್ನು ಬಿಟ್ಟುಕೊಡದ ಸ್ನಿಗ್ಧ ಸೌಂದರ್ಯ ಪಡೆದ ಕನ್ನಡ ಭಾಷೆ ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಎಚ್.ಜಿ. ಸುಧಾ ಅಭಿಪ್ರಾಯಪಟ್ಟರು.
ಹಾಸನ ತಾಲ್ಲೂಕು ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಹಾಗೂ ಇಂಗ್ಲಿಷ್ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾತೃಭಾಷಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ಸಾಹಿತ್ಯ ಚರಿತ್ರೆಯ ಮೊದಲ ಕಾಲಘಟ್ಟದಲ್ಲಿ ಸಂಸ್ಕೃತದ ನೆರಳಿನಿಂದ ಹೊರಬರಬೇಕಾದ ಅನಿವಾರ್ಯತೆ ಹಾಗೂ ಸವಾಲನ್ನು ಕನ್ನಡ ಭಾಷೆ ಎದುರಿಸಿತ್ತು. ಆದರೆ ವಚನಕಾರರು, ಕೀರ್ತನಕಾರರು ಹಾಗೂ ನಡುಗನ್ನಡ ಕವಿಗಳು ಕನ್ನಡ ಭಾಷೆಯ ದೇಸೀತನವನ್ನು ಪ್ರಚುರಪಡಿಸಿ ಕನ್ನಡದ ಸ್ವಂತಿಕೆಯನ್ನು ಉಳಿಸಿಕೊಟ್ಟರು ಎಂದರು.
ಕನ್ನಡತನ ಮೈಗೂಡಿಸಿಕೊಳ್ಳಿ: ಕಾಲೇಜಿನ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ ಮಾತನಾಡಿ, ತಾಯಿ ಮತ್ತು ತಾಯಿ ಭಾಷೆಯದು ಕರುಳ ಸಂಬಂಧ. ಅನೇಕ ಭಾಷೆಗಳನ್ನು ಕಲಿತು, ವಿದೇಶಗಳಲ್ಲಿ ಸಾಧನೆ ಮಾಡಿದರೂ ಕನ್ನಡ ಭಾಷೆಯನ್ನು ಬೆಳೆಸಿದ ಅನೇಕರು ನಮ್ಮ ಮುಂದಿದ್ದಾರೆ. ಇದನ್ನು ಅರಿತು ವಿದ್ಯಾರ್ಥಿ ಸಮೂಹ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಗೌತಮಿ ಸ್ವಾಗತಿಸಿದರು. ಸುಶ್ಮಿತ ವಂದಿಸಿದರು, ಉಮೇಶ್ ಮತ್ತು ಮೇಘನಾ ನಿರೂಪಿಸಿದರು. ಕನ್ನಡ ಉಪನ್ಯಾಸಕ ಕಾಂತರಾಜ್, ಇಂಗ್ಲಿಷ್ ಉಪನ್ಯಾಸಕಿ ಅನಿತಾ ಹಾಗೂ ಕಾಲೇಜಿನ ಎಲ್ಲ ಅಧ್ಯಾಪಕ ಹಾಗೂ ಕಚೇರಿ ಸಿಬ್ಬಂದಿ ಇದ್ದರು.