ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೆಲ ಕಚ್ಚಿದ ಹಾರಾಡುವ ಕನಸು

Mainashree
Updated On : 23 Feb 2014, 9:32 am

ಹಾಸನ: ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ, ದಶಕಗಳ ಕನಸಿನ ಕೂಸಾದ ಹಾಸನ ವಿಮಾನ ನಿಲ್ದಾಣದಿಂದ ಅದೆಷ್ಟು ಮಂದಿ ಈ ವೇಳೆಗೆ ಬಾನಂಗಳದಲ್ಲಿ ವಿಹರಿಸುತ್ತಿರಬೇಕಿತ್ತು.
ಐತಿಹಾಸಿಕವಾಗಿ ತನ್ನ ಮಹತ್ವ ಪಡೆದಿರುವುದರ ಜೊತೆಗೆ ಅರೆ ಮಲೆನಾಡು ಖ್ಯಾತಿಯ ಹಾಸನಕ್ಕೆ ಇನ್ನೆಷ್ಟು ಮೆರುಗು ಬರುತ್ತಿತ್ತೋ. ಆದ್ರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷ್ಯ ಮತ್ತು ಇಚ್ಛಾಶಕ್ತಿ ಕೊರತೆಯಿಂದಾಗಿ ಬರೋಬ್ಬರಿ ದಶಕ ಸಮೀಪಿಸುತ್ತಿದ್ದರೂ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣ ಇನ್ನೂ ಆಗದ ಕಾರಣ ಕಂಡ ಕನಸೆಲ್ಲಾ ನುಚ್ಚು ನೂರಾಗುವಂತೆ ಮಾಡಿದೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 2007ರ ಆ. 26ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಮ್ಮ ಕನಸಿನ ಕೂಸಾದ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದು ರೂಪಿಸಿದ ಯೋಜನೆ ಪ್ರಕಾರ, ಸುಮಾರು 960 ಎಕರೆ ಪ್ರದೇಶದಲ್ಲಿ 1200 ಕೋಟಿ ರು. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ ಮತ್ತು ಪೈಲಟ್ ತರಬೇತಿ ಸಂಸ್ಥೆ ತಲೆ ಎತ್ತಬೇಕಿತ್ತು. ಆದರೆ ಅದೆಲ್ಲವೂ ಇಂದು ಬುಡಮೇಲಾಗಿದೆ.
ಹತ್ತು- ಹಲವು ಆಸೆಗೆ ತಣ್ಣೀರು: ಹಾಸನದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದರೆ ಮೊದಲೇ ಪ್ರವಾಸೋದ್ಯಮದಲ್ಲಿ ವಿಶ್ವಭೂಪಟದಲ್ಲಿ ಹೆಸರುವಾಸಿಯಾಗಿರುವ ಹಾಸನದ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಶ್ರವಣಬೆಳಗೊಳ, ಬೇಲೂರು, ಹಳೇಬೀಡಿಗೆ ಬರುವ ದೇಶ-ವಿದೇಶದ ಪ್ರವಾಸಿಗರು ಹೆಚ್ಚಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಆಶಿಸಲಾಗಿತ್ತು. ಆದರೀಗ ಆ ಕನಸುಗಳೆಲ್ಲಾ ಗಗನ ಕುಸುಮ ಎನ್ನುವಂತಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement