ರು. 12 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ: ಶಾಸಕ ಬಾಲಕೃಷ್ಣ
ಚನ್ನರಾಯಪಟ್ಟಣ: ಹೇಮಾವತಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ತಾಲೂಕಿನಲ್ಲಿ 12 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ವತಿಯಿಂದ ಬಾಗೂರು ಎಂಯುಎಸ್ಎಸ್ನಿಂದ ದ್ಯಾವೇನಹಳ್ಳಿ, ಗೊಲ್ಲರಹೊಸಹಳ್ಳಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹೇಮಾವತಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಹಳ್ಳಿಗಳ ರಸ್ತೆ ಹಾಳಾಗಿರುವ ಹಿನ್ನಲೆಯಲ್ಲಿ ಅವುಗಳ ಅಭಿವೃದ್ಧಿಗೆ 12 ಕೋಟಿ ರು. ವೆಚ್ಚದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ನಿಗಮದ ವತಿಯಿಂದ ಟೆಂಡರ್ ಕರೆದು ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಅವುಗಳನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಟೆಂಡರ್ ಪಡೆದಿರುವ ಗುತ್ತಿಗೆದಾರರು ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾಗುವಷ್ಟರಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾಮಗಾರಿ ಆರಂಭ: ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆಯ ಬದಲಾಗಿ ನವಿಲೆ ಏತ ನೀರಾವರಿ ಯೋಜನೆಯ ಜಾಕ್ವೆಲ್ನಿಂದಲೇ ಪ್ರತ್ಯೇಕ ಮೋಟಾರ್ ಅಳವಡಿಸಿ ಕಲ್ಲೆಸೋಮನಹಳ್ಳಿ ಸುತ್ತಮುತ್ತಲ 18 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಸರ್ವೆ ಕಾರ್ಯ ಪ್ರಾರಂಭಿಸಿದ್ದು, ಸರ್ವೆ ಬಳಿಕ ಸರ್ಕಾರದ ಜತೆ ಚರ್ಚಿಸಿ ಯೋಜನೆಗೆ ಒಪ್ಪಿಗೆ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಟೆಂಡರ್: ಕೇಂದ್ರ ಸರ್ಕಾರದ 2 ಕೋಟಿ ರು. ಅನುದಾನದಲ್ಲಿ ಚನ್ನರಾಯಪಟ್ಟಣ ಬಾಗೂರು ರಸ್ತೆ, ಒಂದು ಕೋಟಿ ರು. ವೆಚ್ಚದಲ್ಲಿ ಬಾಗೂರು ಕೆಂಬಾಳು ರಸ್ತೆ, 50 ಲಕ್ಷ ವೆಚ್ಚದಲ್ಲಿ ಬಾಗೂರು ನುಗ್ಗೇಹಳ್ಳಿ ರಸ್ತೆಯ ಬಾಗೂರು ಎಂಯುಎಸ್ಎಸ್ವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ನೀರಿನ ಬವಣೆ: ತಾಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, 200 ಬೋರ್ವೆಲ್ಗಳನ್ನು ಕರೆಸಲು ಸರ್ಕಾರ ಬೋರ್ವೆಲ್ ಕೊರೆಸಲು ಅನುಮತಿ ನೀಡಿದೆ ಎಂದು ತಿಳಿಸಿದರು.