ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಗ್ಗಟ್ಟಿಂದ ಗ್ರಾಮದ ಅಭಿವೃದ್ಧಿ: ಸಿದ್ದರಾಜು

Rashmi Kasaragodu
Updated On : 26 Feb 2014, 1:03 am

ಸಕಲೇಶಪುರ: ಯಾವುದೇ ಗ್ರಾಮವು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಜನತೆಯ ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಮಹಾತ್ಮಗಾಂಧೀಜಿ ಸ್ವರಾಜ್ಯದ ಕನಸು ನನಸಾಗುವುದು, ಗ್ರಾಮಗಳು ಅಭಿವೃದ್ಧಿಯಾದಾಗ ಮಾತ್ರ ಎಂದು ಜಿಪಂ ಯೋಜನಾಧಿಕಾರಿ ಸಿದ್ದರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಉದೇವಾರ ಗ್ರಾಮದಲ್ಲಿ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಆಟದ ಮೈದಾನವನ್ನು ಉದ್ಘಾಟಿಸಿ ಮಾತನಾಡಿದರು. ಬಹಳ ಸುಂದರವಾದ ಆಟದ ಮೈದಾನವನ್ನು ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ನಿರ್ಮಿಸಲಾಗಿದೆ ಹಾಗೂ ಈ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಲವಾರು ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿರುವ ರೈತರಿಗೆ ಸಹಾಯವಾಗಲೆಂದು ಒಕ್ಕಲು ಕಣಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ಜನತೆಯ ಆರೋಗ್ಯ ಕಾಪಾಡಲು ಶೌಚಾಲಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸಭೆಗಳು ನಡೆದಾಗ ಅಲ್ಲಿನ ಗ್ರಾಮಗಳ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಪಂಚಾಯ್ತಿ ತಪ್ಪುಗಳನ್ನು ಸಾರ್ವಜನಿಕರು ತಿದ್ದುವ ಕಾರ್ಯ ಮಾಡಿದಾಗ ಮಾತ್ರ ಆ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಉದೇವಾರ ಗ್ರಾಪಂ ಉಪಾಧ್ಯಕ್ಷ ಸೈಯದ್ ಫೈರೋಜ್ ಮಾತನಾಡಿ, ಪಂಚಾಯ್ತಿ ಪ್ರತಿ ಕಾಮಗಾರಿಗಳು ಉತ್ತಮವಾಗಿ ಮೂಡಿ ಬರಲು ಸದಸ್ಯರು ಹಾಗೂ ಗ್ರಾಮಸ್ಥರ ಕೊಡುಗೆ ಅಪಾರ. ಇಂತಹ ಉತ್ತಮ ಹಾಗೂ ಸುಸಜ್ಜಿತ ಆಟದ ಮೈದಾನವನ್ನು ನಿರ್ಮಿಸಲು ಗ್ರಾಮಸ್ಥರ ಉತ್ತಮವಾದ ಸಹಕಾರದಿಂದ ಮಾತ್ರ ಸಾಧ್ಯ ಎಂದರು. ಸಮಾರಂಭದಲ್ಲಿ ಜಿಪಂ ಸದಸ್ಯೆ ಸುಲೋಚನಾ ರಾಮಕೃಷ್ಣ, ತಾಪಂ ಅಧ್ಯಕ್ಷೆ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಜಂತ್ರಿ, ಉದೇವಾರ ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಯು.ಬಿ. ಮೋಹನ್, ಚರಣ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement