ಚ.ರಾ.ಪಟ್ಟಣದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ಚನ್ನರಾಯಪಟ್ಟಣ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಹತ್ತಾರು ಗ್ರಾಮಗಳ 800ಕ್ಕೂ ಹೆಚ್ಚು ಜನ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ.
ವೀರಾಂಜನೇಯ ಪಾದಯಾತ್ರೆ ಸಮಿತಿ ಈ ಕಾರ್ಯಕ್ರಮ ಆಯೋಜಿಸಿದ್ದು, ಸುಮಾರು 350 ಜನ ಮಹಿಳೆಯರು ಹೊರಟಿದ್ದಾರೆ. ಪಟ್ಟಣದ 40 ಅಡಿ ಎತ್ತರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಹೊರಟರು. ಪಟ್ಟಣದ ಬೆಸ್ಟ್ ಕ್ಲಬ್ ವತಿಯಿಂದ ಆಹಾರದ ವ್ಯವಸ್ಥೆಗಾಗಿ ಹತ್ತು ಸಾವಿರ ದೇಣಿಗೆ ನೀಡಲಾಗಿದೆಂದು ಕ್ಲಬ್ ಕಾರ್ಯದರ್ಶಿ ಬಾಬು, ಕುಂಬಾರಹಳ್ಳಿ ರಮೇಶ್ ತಿಳಿಸಿದರು. ಪ್ರತಿದಿನ 30ರಿಂದ 35 ಕಿಮೀ ದೂರ ಪಾದಯಾತ್ರೆ ನಡೆಸಿ ಶಿವರಾತ್ರಿ ದಿನದಂದು ಮಂಜುನಾಥ ಸ್ವಾಮಿಯ ದರ್ಶನ ಮಾಡುವುದಾಗಿ ಯಾತ್ರೆಯ ಸಂಚಾಲಕ ಹಾಗೂ ಆದಿಚುಂಚನಗಿರಿ ಶಿಕ್ಷಣ ಮಹಾ ವಿದ್ಯಾಲಯದ ಉಪನ್ಯಾಸಕ ನರಸಿಂಹ ಮೂರ್ತಿ ತಿಳಿಸಿದರು. ತಾಲೂಕಿನ ಹಲವು ಗ್ರಾಮಗಳಿಂದ ನೂರಾರು ಮಹಿಳೆಯರು ಪಾದಯಾತ್ರೆ ಕೈಗೊಂಡಿದ್ದಾರೆ. ಪಟ್ಟಣದ ಮೂಲಕ ಈಗಾಗಲೇ ಬೆಂಗಳೂರು ಕಡೆಯಿಂದ ಪಾದಯಾತ್ರೆ ಮಾಡುತ್ತಿದ್ದು, ಪಟ್ಟಣದ ಹಲವು ಸಂಘ ಸಂಸ್ಥೆಗಳು ಸ್ವಯಂ ಸೇವಕರು ನೀರಿನ ವ್ಯವಸ್ಥೆ, ತಾತ್ಕಾಲಿಕ ತಂಗುದಾಣ, ಮಜ್ಜಿಗೆ, ತಂಪು ಪಾನೀಯ ನೀಡಿದರು.