ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಶು ವೈದ್ಯ ಕಾಲೇಜುಗಳಿಗೆ ಮಾನ್ಯತೆ

Rashmi Kasaragodu
Updated On : 26 Feb 2014, 1:02 am

ಹಾಸನ: ಹಾಸನ, ಶಿವಮೊಗ್ಗ ಮತ್ತು ಬೀದರ್ ಪಶು ವೈದ್ಯ ಕಾಲೇಜುಗಳಿಗೆ ಭಾರತೀಯ ಪಶು ವೈದ್ಯಕೀಯ ಪರಿಷತ್ತಿನಿಂದ ಮಾನ್ಯತೆ ಪಡೆಯುವ ಹಾಗೂ ಹಾಸನ ಮತ್ತು ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜುಗಳಿಂದ ಪದವಿ ಪಡೆದ ಪಶು ವೈದ್ಯಕೀಯ ಪದವೀಧರರ ನೇಮಕಾತಿಗೆ ಸಂಬಂಧಿಸಿದಂತೆ ಶೂನ್ಯ ವೇಳೆಯಲ್ಲಿ ವಿಧಾನ  ಪರಿಷತ್ ಸದಸ್ಯ ಪಟೇಲ್ ಶಿವರಾಂ ಪ್ರಸ್ತಾಪಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಪಶು ಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ, ಈ ಮೂರು ಕಾಲೇಜುಗಳಲ್ಲಿ ಮೂಲ  ಸೌಕರ್ಯಗಳು ಹಾಗೂ ಭೋದಕ- ಭೋದಕೇತರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವುದಾಗಿಯೂ ಈ ಬಗ್ಗೆ ಮರು ಪರಿಶೀಲಿಸಿ ಈ ಕಾಲೇಜುಗಳಲ್ಲಿ 2013-14ನೇ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶಾವಕಾಶ ಮಾಡಿ ಕೊಡಲು ಮಾನ್ಯತೆ ಸಿಕ್ಕಿರುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ: ಹಾಸನ, ಶಿವಮೊಗ್ಗ ಕಾಲೇಜುಗಳಿಂದ ಈಗಾಗಲೇ ಪದವಿ ಪಡೆದಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರು ಕರ್ನಾಟಕ ಪಶು ವೈದ್ಯಕೀಯ ಪರಿಷತ್ತಿನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಸದರಿ ಕಾಲೇಜುಗಳಿಗೆ  ಮಾನ್ಯತೆ ನೀಡಬೇಕೆಂದು ಕೇಂದ್ರ ಕೃಷಿ ಸಚಿವರು ಹಾಗೂ ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಜೊತೆ ಸತತ ಪತ್ರ ವ್ಯವಹಾರ ಮಾಡಿದ ನಂತರ ಹಾಗೂ ಮುಖ್ಯಮಂತ್ರಿ, ಪಶು ಸಂಗೋಪನಾ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸರ್ಕಾರದ ಪಶು ಸಂಗೋಪನಾ ಇಲಾಖೆಯ ಕಾರ್ಯದರ್ಶಿಗಳು ಇವರ ಕೋರಿಕೆ ಬದ್ಧತೆಗೆ ಪ್ರತಿಕ್ರಿಯಿಸಿರುವ ಭಾರತೀಯ ಪಶು ವೈದ್ಯಕೀಯ ಪರಿಷತ್ 2013-14ನೇ ಸಾಲಿಗೆ  ಷರತ್ತು ಬದ್ಧ ಪ್ರವೇಶ ಅನುಮತಿ ನೀಡಿದ್ದು, ಅದರಂತೆ 2013-14 ನೇ ಸಾಲಿಗೆ ಈ 3 ಮಹಾ ವಿದ್ಯಾಲಯಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖೇನ ಪ್ರವೇಶವನ್ನು ಮಾಡಲಾಗಿದೆ ಎಂದು ಹೇಳಿದರು.
ಭಾರತೀಯ ಪಶು ವೈದ್ಯಕೀಯ ಪರಿಷತ್ತಿನ ಷರತ್ತುಗಳನ್ನು ಪೂರೈಸಲು ಈ ಕೆಳಕಂಡಂತೆ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಒಂದೇ ಕಂತಿನಲ್ಲಿ ಹಣ ಬಿಡುಗಡೆ: ಹಾಸನ ಪಶು ವೈದ್ಯಕೀಯ ಮಹಾ ವಿದ್ಯಾಲಯ ಸ್ಥಾಪನೆಗೆ ನೀಡಲಾದ ಆಡಳಿತಾತ್ಮಕ ಅನುಮೋದನೆಯನ್ನು ರು. 7,784.00 ಲಕ್ಷಗಳಿಂದ 13,109-27 ಲಕ್ಷಗಳಿಗೆ ಮರುಪರಿಷ್ಕರಿಸಲಾಗಿದ್ದು, 2013-14ನೇ ಸಾಲಿನ ಆಯವ್ಯಯದಲ್ಲಿ ಒದಗಿಸಲಾಗಿದ್ದ 2500 ಲಕ್ಷಗಳ ಅನುದಾನವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿ ಬೇಕಾಗುವ ಅನುದಾನವನ್ನು 2014-15 ನೇ ಸಾಲಿನಲ್ಲಿ ಒದಗಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಪಶು ವೈದ್ಯಕೀಯ ಮಹಾ ವಿದ್ಯಾಲಯ ಸ್ಥಾಪನೆಗೆ ನೀಡಲಾದ ಆಡಳಿತಾತ್ಮಕ ಅನುಮೋದನೆಯನ್ನು 5000 ಲಕ್ಷಗಳಿಂದ 13,686-46 ಲಕ್ಷಗಳಿಗೆ ಮರು ಪರಿಷ್ಕರಿಸಲಾಗಿದ್ದು, 2013-14ನೇ ಸಾಲಿನ ಆಯವ್ಯಯದಲ್ಲಿ ಒದಗಿಸಲಾದ 2500 ಲಕ್ಷಗಳನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿ ಬೇಕಾಗುವ ಅನುದಾನವನ್ನು 2014-15 ನೇ ಸಾಲಿನಲ್ಲಿ ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಹುದ್ದೆ ಭರ್ತಿಗೆ ಅನುಮೋದನೆ: ಪಶು ವೈದ್ಯಕೀಯ ವಿಶ್ವ ವಿದ್ಯಾನಿಲಯದಲ್ಲಿ ಖಾಲಿ ಇರುವ ಭೋದಕ ಮತ್ತು ಭೋದಕೇತರ ಸಿಬ್ಬಂದಿ ಕೊರತೆ ನೀಗಿಸಲು ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಹತೆಯುಳ್ಳ ಪಶು ವೈದ್ಯಾಧಿಕಾರಿಗಳನ್ನು ಹಾಸನ, ಶಿವಮೊಗ್ಗ ಮತ್ತು ಬೀದರ್ ಕಾಲೇಜುಗಳಿಗೆ ಸಹಾಯಕ ಪ್ರಾದ್ಯಾಪಕರಾಗಿ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಪಶು ವೈದ್ಯಕೀಯ ವಿಶ್ವ ವಿದ್ಯಾನಿಲಯದಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಗೆ ಸರ್ಕಾರದ ಅನುಮೋದನೆ ನೀಡಲಾಗುತ್ತಿದೆ ಎಂದು ಹೇಳಿದರು.
ಹಾಸನ ಮತ್ತು ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜುಗಳಿಂದ ಪದವಿ ಪಡೆದ 71 ಪಶು ವೈದ್ಯಕೀಯ ಪದವಿಧರರಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ ಪಸಂಮಿ. 246 ಪಸಸೆ 2013 ದಿ. 12-02-2014 ರ ಅನ್ವಯ ನೇಮಕಾತಿ ನೀಡಿದ್ದು, ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ರಿಟ್ ಅರ್ಜಿ ಸಂ. 23166-232142013 ಹಾಗೂ 23067-230822013 ರಲ್ಲಿ ನೀಡಬಹುದಾದ ಅಂತಿಮ ತೀರ್ಪಿಗೆ ಮತ್ತು ಈ ಕಾಲೇಜುಗಳಿಂದ ಪದವಿ ಪಡೆದ 71 ಅಭ್ಯರ್ಥಿಗಳ ನೇಮಕಾತಿಯು ಭಾರತೀಯ ಪಶುವೈದ್ಯಕೀಯ ಪರಿಷತ್ನಿಂದ ಮಾನ್ಯತೆ ಪಡೆಯುವ ಷರತ್ತಿಗೊಳಪಟ್ಟು ಇವರುಗಳಿಗೆ ಸ್ಥಳ ನಿಯುಕ್ತಿ ಆದೇಶ ನೀಡಲಾಗಿದೆ ಎಂದು ಹೇಳಿದರು. ರಾಜ್ಯದ ಜಾನುವಾರುಗಳ ಮತ್ತು ಪಶು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಸನ ಮತ್ತು  ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜುಗಳಿಗೆ ಭಾರತೀಯ ಪಶುವೈದ್ಯಕೀಯ ಪರಷತ್ತಿನ ಮಾನ್ಯತೆ ಪಡೆಯಲು ಸರ್ಕಾರದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿದ್ದು, ಈ ಕಾಲೇಜುಗಳಿಗೆ ಭಾರತೀಯ ಪಶು ವೈದ್ಯಕೀಯ ಪರಿಷತ್ತಿನ ಮಾನ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement