ಪುರಸಭೆ ಅಂಗಡಿ ಮಳಿಗೆಗಳ ಬಹಿರಂಗ ಹರಾಜು, ವಿಲೇವಾರಿ
ಹೊಳೆನರಸೀಪುರ: ಪಟ್ಟಣದ ಪುರಸಭೆಯಲ್ಲಿ 2014-15ನೇ ಸಾಲಿನ ನಾನಾ ವಾರ್ಷಿಕ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಮಾಡುವ ಮೂಲಕ ವಿಲೇವಾರಿ ಮಾಡಲಾಯಿತು.
ವಾರದ ಸಂತೆ ಸುಂಕ ವಸೂಲಾತಿಯ ಹಕ್ಕನ್ನು ಕಡವಿನಕೋಟೆ ಕುಮಾರ್ ಅವರಿಗೆ 2.04 ಲಕ್ಷಕ್ಕೆ ನೀಡಲಾಯಿತು. ದಿನವಹಿ ಮಾರುಕಟ್ಟೆ ಸುಂಕ ವಸೂಲಾತಿಯ ಹಕ್ಕನ್ನು ಕೆ.ಬಿ. ಕೊಪ್ಪಲು ಚಂದ್ರ ಎಂಬುವವರು ಈ ಬಾರಿ 8.10 ಲಕ್ಷಕ್ಕೆ ಪಡೆದರು.
ಹಾಸನ- ಮೈಸೂರು ರಸ್ತೆಯಲ್ಲಿನ ದೊಡ್ಡ ಮಾಂಸದ ಅಂಗಡಿಯಲ್ಲಿ ಮಾಂಸ ಮಾರಾಟದ ಹಕ್ಕನ್ನು ಹೊಳೆನರಸೀಪುರದ ಎಚ್.ಎಸ್. ಬಾಬು ಅವರು 6 ಲಕ್ಷಕ್ಕೆ ಪಡೆದರೆ, ಕವರ್ ಡಕ್ ಬಾಜುವಿನ ಮಲ್ಲಪ್ಪನಹಳ್ಳಿ ಕ್ರಾಸ್ ಬಳಿಯಲ್ಲಿನ ಮಾಂಸದ ಅಂಗಡಿಯಲ್ಲಿ ಮಾಂಸ ಮಾರಾಟದ ಹಕ್ಕನ್ನು ಪಟ್ಟಣದ ಎಚ್.ಬಿ. ಶ್ರೀನಿವಾಸ್ 3.25 ಲಕ್ಷಕ್ಕೆ ಪಡೆದರು. ಅರಕಲಗೂಡು ರಸ್ತೆಯಲ್ಲಿನ ಮಾಂಸದ ಅಂಗಡಿಯಲ್ಲಿ ಮಾಂಸ ಮಾರಾಟದ ಹಕ್ಕು ಪಟ್ಟಣದ ದೊಡ್ಡ ಮಸೀದಿ ಬೀದಿಯ ಮುಜಾಹಿದ್ ಪಾಷ 2.70 ಲಕ್ಷಕ್ಕೆ ಪಡೆದರು. ಇನ್ನುಳಿದಂತೆ ಪುರಸಭೆಯ ಒಡೆತನಕ್ಕೆ ಸೇರಿರುವ ತೆಂಗಿನಮರಗಳ ಫಸಲನ್ನು ಎರಡು ವರ್ಷಗಳ ಅವಧಿಗೆ ಪಟ್ಟಣದ ಕೋಟೆಯ ದೊರೆಸ್ವಾಮಿ 30 ಸಾವಿರಕ್ಕೆ ಪಡೆದರು ಎಂದು ಪುರಸಭೆ ಮುಖ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ.