ಮಕ್ಕಳ ಪ್ರವಾಸದ ಸುರಕ್ಷತೆಗೆ ಕ್ರಮ
ಹಾಸನ: ಅರಕಲಗೂಡು ರಾಮಾನಾಥಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸರ್ಕಾರಿ ಶಾಲೆಯ ಮಕ್ಕಳನ್ನು ಚಲನ ಚಿತ್ರ ವೀಕ್ಷಣೆಗೆ ಸರಕು ತುಂಬುವ ಆಪೆ ಗಾಡಿಗಳಲ್ಲಿ ಕರೆತರುತ್ತಿರುವುದಿಲ್ಲವೆಂದು ಹಾಸನದ ಡಿಡಿಪಿಐ ವರದಿಯಲ್ಲಿ ತಿಳಿಸಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಇಂತಹ ಪ್ರಕರಣಗಳು ವರದಿಯಾದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ವಿಧಾನ ಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರವಾಸದ ಸುರಕ್ಷತೆಗೆ ಸಂಬಂಧಿಸಿದಂತೆ, ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿರುವಂತೆ ರಾಜ್ಯ ಸರ್ಕಾರದ ವಾಹನಗಳನ್ನೇ ಅಂದರೆ ಕೆಎಸ್ಆರ್ಟಿಸಿ, ಕೆಎಸ್ಟಿಡಿಸಿ ವಾಹನಗಳನ್ನೇ ಕಡ್ಡಾಯ ಬಳಸುವಂತೆ ಸೂಚಿಸಿಲಾಗಿದೆ. ಶೈಕ್ಷಣಿಕ ಪ್ರವಾಸಕ್ಕೆ ಇಲಾಖಾ ಅನುಮತಿ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ತೆರಳಲಿರುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಾಹಿತಿ ಇಲಾಖೆಗೆ ಕಡ್ಡಾಯವಾಗಿ ನೀಡಿ ಅನುಮೋದನೆ ಪಡೆಯಲು ಸೂಚಿಸಿ, ಮಕ್ಕಳ ಚಲನ ಚಿತ್ರ ವೀಕ್ಷಣೆಗೆ ಸರ್ಕಾರದಿಂದ ಯಾವುದೇ ಅನುದಾನ ಮಂಜೂರು ಮಾಡಿಲ್ಲ ಎಂದು ತಿಳಿಸಿದರು.