'ಯುವಕರು ಸಾಹಿತ್ಯ ಬೆಳೆಸಿ, ಉಳಿಸಲಿ'
ಬೇಲೂರು: ಪ್ರಸ್ತುತ ಜನಪದ ಸಾಹಿತ್ಯ ನಶಿಸುತ್ತಿದ್ದು ಯುವಕರು ಸಾಹಿತ್ಯವನ್ನು ಉಳಿಸಿ ಬೆಳಸಲು ಮುಂದೆ ಬರಬೇಕು ಎಂದು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹೆಚ್.ಎಂ. ದಯಾನಂದ ತಿಳಿಸಿದರು.
ಶ್ರೀಸೌಮ್ಯ ನಾಯಕಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 17ನೇ ತಿಂಗಳ ಮನೆ ಮನೆ ಸಾಹಿತ್ಯಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಆರಂಭದಿಂದ ಇಂದಿನವರೆಗೆ ಉತ್ತಮ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದು ಸಾರ್ವಜನಿಕವಾಗಿ ಕೆಲಸ ಕಾರ್ಯ ಮಾಡುತ್ತಿದ್ದು, ಅದರಲ್ಲಿ ಬಹು ಮುಖ್ಯವಾಗಿ 5 ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಶ್ಲಾಘನೀಯ: ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಬಿ. ಮೋಹನ್ ಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡ ವೇದಿಕೆ ಸಾಹಿತ್ಯ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ ಅಲ್ಲದೆ ಅಂಗವಿಕಲರಿಗೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಹಿರಿಯ ನಾಗರಿಕರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ವಿಷಾದನೀಯ: ವಿಶ್ವ ಸಂಯುಕ್ತ ಶಾಲೆಯ ಪ್ರಾಂಶುಪಾಲ ಜಯಕುಮಾರ್ ಮಾತನಾಡಿ, ಇಂದಿನ ವೈಜ್ಞಾನಿಕ ಆಡಂಬರದಿಂದ ಜನಪದ ಸಾಹಿತ್ಯ ದೂರವಾಗುತ್ತಿದೆ ಹಿಂದೆ ಸರ್ಕಾರ ಆಯೋಜಿಸುತ್ತಿದ್ದ ಯುವಜನ ಮೇಳಗಳು ಇಂದು ಸ್ವಾರಸ್ಯ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಸಂಸ್ಕೃತಿ ಬಿಂಬಿಸಬೇಕು: ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಯುವ ಜನತೆ ದೇಶಿಯ ಸಂಸ್ಕೃತಿಯನ್ನು ಮರೆತಿದ್ದಾರೆ ಹಿಂದಿನ ಕಾಲದ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಣ್ಣೇಗೌಡ, ರೋಟರಿ ಅಧ್ಯಕ್ಷ ತಿಮ್ಮೇಗೌಡ,ಸಾಹಿತಿ ಬೇಲೂರು ಕೃಷ್ಣಮೂರ್ತಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಎಲ್. ರಾಜೇಗೌಡ, ಮ. ಶಿವಮೂರ್ತಿ, ಶಿಕ್ಷಕ ಬೋಮ್ಮಡಿಹಳ್ಳಿ ಕುಮಾರಸ್ವಾಮಿ, ಶಿಕ್ಷಕಿ ನಳಿನಾಕ್ಷಿ ಇದ್ದರು.