ಸಂಸ್ಕೃತಿಗೆ ನಾಟಕೋತ್ಸವ ಮೂಲ ಉದ್ದೇಶ
ಅರಸೀಕೆರೆ: ಪ್ರತಿಯೊಬ್ಬರಲ್ಲಿ ಅನುಭವದ ಸುಜ್ಞಾನವನ್ನು ಬೆಳೆಸುವ ಮನೋರಂಜನೆ ಜೊತೆಗೆ ಅದರಲ್ಲಿನ ಸತ್ಯಾಂಶಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸುಸಂಸ್ಕೃತ ಸಮಾಜವನ್ನು ಕಟ್ಟಿಬೆಳೆಸುವುದೇ ನಾಟಕೋತ್ಸವದ ಮೂಲ ಉದ್ದೇಶವಾಗಿದೆ ಎಂದು ಕನ್ನಡ ಪುಸ್ತಕ ಪ್ರಾದಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಅರಸೀ ಸಾಂಸ್ಕೃತಿಕ ವೇದಿಕೆ ವತಿಯಿಂದ ಶುಕ್ರವಾರ ಬೆಳಗ್ಗೆ ಪಟ್ಟಣದ ವಿವೇಕಾನಂದ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೀದಿ ನಾಟಕಗಳು ಹಾಗೂ ಸಾಮಾಜಿಕ ಜವಾಬ್ದಾರಿ ಮತ್ತು ವಿಜ್ಞಾನ ಹಾಗೂ ನಾಟಕಗಳ ಬಗ್ಗೆ ಇಂದು ಚರ್ಚೆ ಎಂಬ ವಿಚಾರ ಸಂಕೀರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಾವಿದರ ಜವಾಬ್ದಾರಿ: ಪ್ರಸ್ತುತ ಜಾಗತೀಕರಣ ಪರಿಣಾಮದ ಕಾರಣ ಅನೇಕ ಸಮಸ್ಯೆಗಳನ್ನು ಭಾರತ ಸೇರಿದಂತೆ ಅನೇಕ ಬಡ ರಾಷ್ಟ್ರಗಳು ಇಂದು ಅನುಭವಿಸುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲಿ ಕಂಡು ಕಾಣದಂತೆ ಸಮಸ್ಯೆಗಳ ಸರಮಾಲೆಗಳು ಸೃಷ್ಟಿಯಾಗುತ್ತಿದೆ ಎಂದರು.
ಈ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶನಗಳು ಅತ್ಯಂತ ಫಲಪ್ರದವಾಗಿದ್ದು, ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಇಂದಿನ ಕಲುಷಿತ ಸಮಾಜದಲ್ಲಿ ಸಮೃದ್ಧಿ, ಶಾಂತಿ ಹಾಗೂ ನೆಮ್ಮದಿಯ ಮನೋಧರ್ಮವನ್ನು ಎಲ್ಲರಲ್ಲೂ ಬೆಳೆಸುವ ಕಾರ್ಯವನ್ನು ರಂಗಭೂಮಿ ಕಲಾವಿದರು ಮಾಡಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಧಾರಣೆ ಸಾಧ್ಯ: ನಾಟಕ ನಿರ್ದೇಶಕರಾದ ಮೈಸೂರಿನ ಯೋಗಾನಂದ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಾಟಕೋತ್ಸವ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನಾಟಕಗಳ ತರಬೇತಿ ನೀಡುವ ಕಾರಣ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಪ್ರತಿಪಾದಿಸಿದರು.
ಸಹಕಾರಿ: ಇಂದಿನ ಮಕ್ಕಳು ರಂಗಭೂಮಿಯನ್ನು ಉಳಿಸಿ ಬೆಳೆಸಿದರೆ, ಆ ರಂಗಭೂಮಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅತ್ಯಂತ ಸಹಾಯಕಾರಿ ಆಗುತ್ತದೆ ಎಂದು ಹೇಳಿದರು. ರಾಜ್ಯ ವಿಜ್ಞಾನ ಪರಿಷತ್ನ ಶ್ರೀನಿವಾಸ್ ನಟೇಕರ್ ಸಾಮಾಜಿಕ ಜವಾಬ್ದಾರಿ ಎಂಬ ವಿಷಯ ಕುರಿತಂತೆ ವಿಚಾರಗೋಷ್ಠಿ ನಡೆಸಿಕೊಟ್ಟರು. ವಿವೇಕಾನಂದ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಆರ್. ನಿಂಗಪ್ಪ, ರಾಜ್ಯ ವಿಜ್ಞಾನ ಪರಿಷತ್ನ ರಾಜ್ಯಾಧ್ಯಕ್ಷ ಡಾ.ಎಚ್.ಆರ್. ಸ್ವಾಮಿ, ಜಿಲ್ಲಾ ಗೌರವಾಧ್ಯಕ್ಷ ಡಾ. ಜಗದೀಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮೇಲೆಗೌಡ, ಅರಸೀ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷೆ ಮಮತರಾಣಿ ಕಾರ್ಯದರ್ಶಿ ಶಿಕ್ಷಕಿ ಮಮತ ಖಜಾಂಚಿ ಸಂತೋಷ್ ಇದ್ದರು.