ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಂಪಾಪುರ ಬಳಿ ಐದನೇ ಕಾಡಾನೆ ಸೆರೆ

Rashmi Kasaragodu
Updated On : 26 Feb 2014, 1:04 am

ಆಲೂರು: ಜಿಲ್ಲೆಯ ಗಡಿಭಾಗವಾದ ತಾಲೂಕಿನ ಹಾಗೂ ಕೊಡಗು ಪ್ರದೇಶಕ್ಕೆ ಸೇರಿರುವ ಹಂಪಾಪುರ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮತ್ತೊಂದು ಕಾಡಾನೆಯನ್ನು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು.
ಬೆಳಗ್ಗೆಯಿಂದಲೇ ಉಂಬಳಿಬೆಟ್ಟ ಹಾಗೂ ಹಂಪಾಪುರದ ಅರಣ್ಯ ಪ್ರದೇಶದಲ್ಲಿ ಆನೆಗಳು ಬೀಡು ಬಿಟ್ಟಿರುವುದನ್ನು ಅರಿತ ಅರಣ್ಯ ಇಲಾಖೆಯ ತಂಡ ಸಂಜೆ 3.35ರಲ್ಲಿ ಹಂಪಾಪುರದ ಕರೀಕಡ್ಡಿಗಿಡ ಕಾಡು ಪ್ರದೇಶದಲ್ಲಿ 8 ಆನೆಗಳೊಂದಿಗೆ ಬೀಡು ಬಿಟ್ಟಿದ್ದ ಗಂಡಾನೆಯನ್ನು ಗುರುತಿಸಿ ಅದಕ್ಕೆ ನಿಖರವಾಗಿ ಅರವಳಿಕೆ ಮದ್ದನ್ನು ನೀಡಿದರು. ನಂತರ ಸ್ವಲ್ಪ ದೂರ ಓಡಿ ಹೋಗಿ ಪ್ರಜ್ಞೆ ತಪ್ಪಿದ ಕಾಡಾನೆಯನ್ನು ಸಾಕಾನೆಗಳಾದ ಅಭಿಮನ್ಯು, ಶ್ರೀರಾಮ, ಅರ್ಜುನಾ, ಬಲರಾಮ, ಗಜೇಂದ್ರ, ವಿಕ್ರಂ, ಗೋಪಾಲಸ್ವಾಮಿ, ಭೀಮ, ಪ್ರಶಾಂತ್, ವರಲಕ್ಷ್ಮೀಯ ಆನೆಗಳ ಸಹಾಯದಿಂದ ಕಾಡಾನೆಯನ್ನು ಸರಪಳಿಯಿಂದ ಬಂಧಿಸಿ, ಅದನ್ನು ಕ್ಯಾಂಪ್ಗೆ ತರಲು ಪ್ರಯತ್ನಿಸಿದರು.
ಎಡಬಿಡದೆ ದಾಂದಲೆ: ಈ ಸಂದರ್ಭದಲ್ಲಿ ಕತ್ತಲಾಗಿದ್ದರಿಂದ ಆನೆಯು ಸಹ ವಿಪರೀತ ಪ್ರತಿರೋಧ ತೋರುತ್ತಿದ್ದರಿಂದ ಆನೆಯನ್ನು ಆಲೂರು ಗಡಿಭಾಗದ ಹರೀಹಳ್ಳಿ ಸೇತುವೆ ಬಳಿ ಅದನ್ನು ಮರಕ್ಕೆ ಕಟ್ಟಿ ಹಾಕಲಾಯಿತು. ಅದನ್ನು ಬುಧವಾರ ಕ್ಯಾಂಪ್ಗೆ ತರಲು ತೀರ್ಮಾನಿಸಲಾಯಿತು. ಕಳೆದ ಎರಡು ದಶಕಗಳಿಂದಲೂ ತಾಲೂಕು ಸೇರಿದಂತೆ ಸಕಲೇಶಪುರ ಹಾಗೂ ಕೊಡಗಿನ ಕೆಲಮೊಂದು ಪ್ರದೇಶಗಳಲ್ಲಿ ಅದರಲ್ಲೂ ಹೇಮಾವತಿ ಹಿನ್ನೀರಿನ ಹಂಪಾಪುರ, ಉಂಬಳಿಬೆಟ್ಟಗಳಲ್ಲಿ ನಿರಂತರವಾಗಿ ಎಡಬಿಡದೆ ದಾಂಧಲೆ ನಡೆಸಿ ಹಲವಾರು 35ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿತೆಗೆದುಕೊಂಡು ಕೋಟ್ಯಾಂತರ ರು.ಮೌಲ್ಯದ ಬೆಳೆನಾಶ ಮಾಡಿದ್ದ 45ಕ್ಕೂ ಹೆಚ್ಚಿರುವ ಆನೆಗಳ ಪೈಕಿ ಕಳೆದ ಕೆಲವು ತಿಂಗಳ ಅಂತರದಲ್ಲಿ ಮಕ್ನಾ ಹಾಗೂ ಅಪಾಯಕಾರಿ ಒಂಟಿ ಸಲಗ ಸೇರಿದಂತೆ ಐದು ಕಾಡಾನೆಗಳನ್ನು ಅರಣ್ಯ ಇಲಾಖೆಯವರು ಹಿಡಿದಿದ್ದು, ಕೆರೋಡಿ ಬಳಿ ಕಳೆದ ತಿಂಗಳು ಒಂದು ಒಂಟಿ ಸಲಗ, ನಾಗಾವಾರ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಒಂಟಿ ಸಲಗವನ್ನು 1 ತಿಂಗಳ ಅಂತರದಲ್ಲಿ ಹಿಡಿದಿದ್ದರು.
ಸಕಲ ಸಿದ್ಧತೆಗಳೊಂದಿಗೆ: ಎರಡು ಆನೆಗಳನ್ನು ಹಿಡಿದಿದ್ದ ಸಂದರ್ಭದಲ್ಲಿ ಯಾರಿಗೂ ತಿಳಿಯದಂತೆ ಕ್ಯಾಂಪ್ನ್ನು ಖಾಲಿ ಮಾಡಿಕೊಂಡು ಹೋಗಿದ್ದರು. ಆದರೆ ಫೆ.13ರಂದು ಕಲ್ಲಾರೆ ಬಳಿ ವ್ಯಕ್ತಿಯೋರ್ವನನ್ನು ಒಂಟಿ ಸಲಗ ಬಲಿ ತೆಗೆದುಕೊಂಡ ಸಂದರ್ಭದಲ್ಲಿ ರೊಚ್ಚಿಗೆದ್ದ ಜನತೆ ಆರ್ಎಫ್ಒ ಮೇಲೆ ಹಲ್ಲೆ ನಡೆಸಿದ್ದರು. ವ್ಯಕ್ತಿಯ ಶವವನ್ನು ತೆಗೆಯಲು ಬಿಡದೆ ಜಿಲ್ಲಾಧಿಕಾರಿ ಬರುವವರೆಗೂ ಡಿಎಫ್ಒ ಸೇರಿದಂತೆ ಎಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದಿಗ್ಬಂಧ ಹಾಕಿ ಶವದ ಬಳಿಯೇ ಕೂರಿಸಿದ್ದರು. ಇದರಿಂದ ಪಾಠ ಕಲಿತ ಅರಣ್ಯ ಇಲಾಖೆಯವರು ಈ ಭಾರಿ ತಡಾ ಮಾಡದೆ ಮಾಗಡಿಹಳ್ಳಿ ಕ್ಯಾಂಪ್ಗೆ 10 ಸಾಕಾನೆಗಳನ್ನು ಕರೆಸಿಕೊಂಡು ಸಕಲ ಸಿದ್ಧತೆಗಳೊಂದಿಗೆ ಕಾರ್ಯಪ್ರವೃತ್ತರಾಗಿ ಕಳೆದ ಫೆ.17 ರಂದು ಅಪಾಯಕಾರಿ ಮಕ್ನಾ ಆನೆಯನ್ನು ಉಂಬಳೆಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದ್ದರು. ಅಂದು ಆನೆಯನ್ನು ಸಾಗಿಸಲು ಸಿದ್ದರಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರಾತ್ರಿ ಈ ಭಾಗದಲ್ಲಿ ತಲೆನೋವಾಗಿ ಪರಿಣಮಿಸಿದ್ದ ಅಪಾಯಕಾರಿ ಒಂಟಿ ಸಲಗವನ್ನು ಗುಂಪುಕಟ್ಟಿಕೊಂಡು ಬಂದು ಕ್ಯಾಂಪ್ಗೆ ನುಗ್ಗಿ ಕಟ್ಟಿ ಹಾಕಲಾಗಿದ್ದ ಮಕ್ನಾ ಆನೆಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದವು ಹಾಗೂ ಅರ್ಜುನಾ ಆನೆಯ ಮೇಲೆ ದಾಳಿ ನಡೆಸಿದ್ದವು.
ಹೆಡ್ ಲೈಟ್ ಬಳಕಿನಲ್ಲೇ ಹರಸಾಹಸ: ಬೇರೆಡೆ ಹೋಗದೆ ಮಕ್ನಾ ಸೆರೆ ಸಿಕ್ಕ ಉಂಬಳಿಬೆಟ್ಟ ಅರಣ್ಯಪ್ರದೇಶದಲ್ಲಿ ಬೀಡುಬಿಟ್ಟದ್ದವು. ಇದರಿಂದಾಗಿ ಒಂಟಿಸಲಗ ಕ್ಯಾಂಪ್ನ ಬಳಿಯೇ ಇರುವುದರಿಂದ ಮಕ್ನಾ ಆನೆಯನ್ನು ಮತ್ತಿಗೋಡು ಅರಣ್ಯ ಧಾನಕ್ಕೆಸಾಗಿಸುವುದನ್ನು ಕೈಬಿಟ್ಟು, ಅರಣ್ಯ ಇಲಾಖೆಯವರು ಮಾರನೇ ದಿನವು, ಒಂಟಿ ಸಲಗವನ್ನು ಹಿಡಿಯಲು ಕಾರ್ಯಾಚರಣೆ ಕೈಗೊಂಡರು. ಇಡೀ ದಿನ ಕಣ್ಣಾಮುಚ್ಚಾಲೆ ಆಟವಾಡಿದ ಒಂಟಿ ಸಲಗ ಸಂಜೆ 6ರಲ್ಲಿ ಕಡೆಗೂ ಅರವಳಿಕೆ ಗುರಿಕಾರರ ಗುರಿಗೆ ಸಿಕ್ಕಿಬಿದ್ದು, ಮಕ್ನಾ ಆನೆಯನ್ನು ಹಿಡಿದು ಹೇಮಾವತಿ ನದಿಯ ಇನ್ನೊಂದು ಬದಿಯಲ್ಲಿ ಇರುವ ಮಾಗಡಿಹಳ್ಳಿ ಕ್ಯಾಂಪ್ಗೆ ಕಟ್ಟಿಹಾಕಿದ್ದರು. ಹೊಳೆಯನ್ನು ದಾಟಿ ಉಂಬಳಿ ಬೆಟ್ಟ ಅರಣ್ಯದಿಂದ ಕ್ಯಾಂಪ್ಗೆ ನುಗ್ಗಿ ದಾಂಧಲೆ ನಡೆಸಿದ್ದನ್ನು ಅರಿತ ಅರಣ್ಯಇಲಾಖೆಯವರು ಒಂಟಿ ಸಲಗ ಸೆರೆಸಿಕ್ಕ ಉಂಬಳಿಬೆಟ್ಟದಲ್ಲಿ ಒಂಟಿ ಸಲಗವನ್ನು ಕಟ್ಟದೆ ಕತ್ತಲಾದರೂ ಸಹ ತಡ ಮಾಡದೆ ಇಲಾಖೆಯ ವಾಹನಗಳ ಹೆಡ್ ಲೈಟ್ ಬಳಕಿನಲ್ಲೇ ಹರಸಾಹಸ ಪಟ್ಟು ಹೊಳೆಯನ್ನು ದಾಟಿಸಿಕೊಂಡು ರಾತ್ರಿ 12ರಲ್ಲಿ ಒಂಟಿ ಸಲಗವನ್ನು ಲಾರಿಗೆ ತುಂಬಿ ರಾತ್ರೋರಾತ್ರಿ ಮತ್ತಿಗೋಡು ಅರಣ್ಯ ಧಾಮಕ್ಕೆ ರವಾನೆ ಮಾಡಿದರು.
ಕಾಡಾನೆ ಹಾಗೂ ಮಾನವನ ಸಂಘರ್ಷಕ್ಕೆ ತೆರೆ: ಅಂದಿನಿಂದ ಸರಿಯಾಗಿ 1 ವಾರ ಅಪರೇಷನ್ ಮಾಗಡಿಹಳ್ಳಿಗೆ ಬಿಡುವು ನೀಡಿದ್ದ ತಂಡ ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಮೊದಲು ದಿನದಲ್ಲೇ ಮತ್ತೊಂದು ಒಂಟಿ ಸಲಗವನ್ನು ಹಿಡಿಯುವಲ್ಲಿ ಸಫಲವಾಗಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿಯಿಂದ ಸುತ್ತಮುತ್ತಲ ಜನರು ಶ್ಲಾಘಿಸಿದ್ದು, ಈಗಾಗಲೇ 5 ಪುಂಡಾನೆಗಳನ್ನು ಹಿಡಿದಿರುವ ಅರಣ್ಯ ಇಲಾಖೆಯವರು ಇನ್ನಷ್ಟು ತ್ವರಿತವಾಗಿ ಎಲ್ಲಾ ಆನೆಗಳನ್ನು ಹಿಡಿದು ಸಾಗಿಸಿದರೆ ಕಳೆದ 20 ವರ್ಷಗಳಿಂದ ನಿತಂತರವಾಗಿ ನಡೆಯುತ್ತಿರುವ ಕಾಡಾನೆ ಹಾಗೂ ಮಾನವನ ಸಂಘರ್ಷಕ್ಕೆ ತೆರೆ ಬೇಳಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿದ್ದಾರೆ.
ಶೀಘ್ರವಾಗಿ ಸೆರೆಹಿಡಿಯಿರಿ: ಈ ಸಂಬಂಧವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಎಚ್.ಕೆ. ಕುಮಾರಸ್ವಾಮಿ, ಅರಣ್ಯ ಇಲಾಖೆಯವರು 1 ವಾರ ಅಂತರದಲ್ಲಿ ಮಕ್ನಾ ಸೇರಿದಂತೆ 3 ಒಂಟಿ ಸಲಗಗಳನ್ನು ಹಿಡಿದಿರುವುದು ಸಂತಸ ತಂದಿದೆ. ಈ ವರ್ಷ ಒಟ್ಟಾರೆ ಹಿಡಿದಿರುವ ಐದು ಆನೆಗಳು ಸಹ ನರಹಂತಕ ಆನೆಗಳಾಗಿದ್ದವು. ಇವುಗಳು ರಾತ್ರಿ ಹಗಲು ಎನ್ನದೆ ಗ್ರಾಮಗಳ ರಸ್ತೆಯಲ್ಲಿಯೇ ಓಡಾಡುವುದಲ್ಲದೆ ಗ್ರಾಮದೊಳಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದವು. ಇದರಿಂದ ಈ ಪ್ರದೇಶದ ಜನರು ಭಯಭೀತರಾಗಿದ್ದರು. ವಿಧಿ ಇಲ್ಲದೆ ಕೆಲಸಕ್ಕೆ ಹೋಗಿದ್ದ ಕಲ್ಲಾರೆಯ ವ್ಯಕ್ತಿಯೋರ್ವರನ್ನು ಹಗಲು ವೇಳೆಯಲ್ಲೇ ಅಟ್ಟಾಡಿಸಿಕೊಂಡು ಬಂದು ಸಾಯಿಸಿದ್ದ ಒಂಟಿ ಸಲಗ ಸೇರಿದಂತೆ ಈ ಹಿಂದೆ ಇಬ್ಬರನ್ನು ಬಲಿ ತೆಗೆದುಕೊಂಡು ಮಕ್ನಾ ಕೆರೋಡಿ ಹಾಗೂ ಪುರಭೈರವನಹಳ್ಳಿ ಬಳಿ ವ್ಯಕ್ತಿ ಹಾಗೂ ಮಹಿಳೆಯನ್ನು ಬಲಿ ತೆಗೆದುಕೊಂಡಿದ್ದ ಮೂರು ಆನೆಗಳನ್ನು ಸಹ ಅರಣ್ಯ ಇಲಾಖೆಯವರು ಹಿಡಿದಿದ್ದು, ಇಂದೂ 10ಕ್ಕೂ ಹೆಚ್ಚು ಸಲಗಗಳು ಬೀಡು ಬಿಟ್ಟಿದ್ದು, ಅವುಗಳನ್ನು ಶೀಘ್ರವಾಗಿ ಸೆರೆ ಹಿಡಿದು ನಂತರ ಉಳಿದ ಆನೆಗಳನ್ನು ಹಿಡಿದು ಸಾಗಿಸಿದರೆ ಈ ಭಾಗದ ಜನ ನೆಮ್ಮದಿಯಿಂದ ಜೀವನ ನಡೆಸಬಹುದು.ಅಲ್ಲದೆ ಅರಣ್ಯ ತಂಡಕ್ಕೆ ಗ್ರಾಮಸ್ಥರು, ಜನಪ್ರತಿನಿಧಿಗಳು ಸಹಕರಿಸಿ ದರು. ಕಾರ್ಯಾಚರಣೆಯಲ್ಲಿ ಡಿಎಫ್ಒ ಅಪ್ಪುರಾವ್, ಆರ್ಎಫ್ಒ ದೇವರಾಜು, ಗುರಿಕಾರರಾದ ವೆಂಕಟೇಶ್, ಕರಂಬಾಯ್, ಅಕ್ರಂ, ವೈದ್ಯರಾದ ಚಿಟ್ಟಿಯಪ್ಪ, ನಾಗರಾಜ್, ಉಮಾಶಂಕರ್ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement