ಕ್ಷುಲ್ಲಕ ಕಾರಣ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಅರಸೀಕೆರೆ: ತಾಲೂಕಿನ ಕಿತ್ತನಕೆರೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೆ.ಎಸ್. ಬಸವರಾಜು (48) ಎಂಬ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಾಯಾಳುವನ್ನು ಪಟ್ಟಣದ ಜೆ.ಸಿ. ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳುಹಿಸಿಕೊಡಲಾಗಿದೆ.
ಗಾಯಗೊಂಡ ಕೆ.ಎಸ್. ಬಸವರಾಜು ಎಂಬಾತ ಎಸ್ಕೆ ಇಟ್ಟಿಗೆ ಕಾರ್ಖಾನೆಯೊಂದನ್ನ ನಡೆಸುತ್ತಿದ್ದರು ಎನ್ನಲಾಗಿದೆ. ಕಾರ್ಖಾನೆಗಳ ಕೂಲಿ ಕಾರ್ಮಿಕರ ವಿಷಯ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಗಲಭೆ ಸಂಬವಿಸಿದ್ದು, ಪಿ. ಹೊಸಹಳ್ಳಿಯ ಓಂಕಾರಪ್ಪ, ಧರಣಿ, ಸಂತೋಷ, ಮರುಳಸಿದ್ದಪ್ಪ ಎಂಬುವರು ವಿನಾಕಾರಣ ಇಟ್ಟಿಗೆ ಕಾರ್ಖಾನೆಗೆ ನುಗ್ಗಿ ಏಕಾಏಕಿ ಕೆ.ಎಸ್. ಬಸವರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ಸಂಬಂಧ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಸೂಕ್ತ ರಕ್ಷಣೆಗೆ ಮನವಿ: ಕಳೆದ ಕೆಲತಿಂಗಳುಗಳಿಂದ ವಿನಾಕಾರಣ ತೊಂದರೆ ನೀಡುತ್ತಿದ್ದ ವ್ಯಕ್ತಿಗಳು ಒಮ್ಮಿಂದೊಮ್ಮೆಲೆ ಹಲ್ಲೆ ನಡೆಸಿದ್ದು, ಪ್ರಾಣಬೆದರಿಕೆ ಒಡ್ಡಿದ್ದಾರೆ. ಆದ್ದರಿಂದ ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ದೂರುದಾರರು ಪೊಲೀಸರಲ್ಲಿ ಮನವಿ ಸಲ್ಲಿಸಿದ್ದಾರೆ.