ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯಕ್ಕೆ ಬಜರಂಗದಳ ಖಂಡನೆ
ಹಾಸನ: ಬಾಂಗ್ಲಾ ದೇಶಿಯರ ಕಳ್ಳ ನುಸುಳುವಿಕೆ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯ ಆತ್ಯಾಚಾರವನ್ನು ಖಂಡಿಸಿ ಬಜರಂಗದಳದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾ ನುಸುಳುಕೋರರು ನಿರಂತರ ಭಾರತಕ್ಕೆ ನುಸುಳುತ್ತಿದ್ದಾರೆ. ಈ ದೇಶದ ಅರ್ಥ ವ್ಯವಸ್ಥೆ ಹಾಗೂ ಆಂತರಿಕ ಭದ್ರತೆಗೆ ಅಪಾಯ ತರುತ್ತಿದ್ದಾರೆ. ಅಸ್ಸಾಂನಿಂದ ಪ್ರಾರಂಭವಾದ ಈ ಕಳ್ಳ ನುಸುಳುವಿಕೆ ಇಡೀ ದೇಶವನ್ನು ವ್ಯಾಪಿಸಿ ಸಂಕಟಮಯ ಪರಿಸ್ಥಿತಿಯನ್ನು ತಂದಿದೆ. ಆಯಾ ರಾಜ್ಯಗಳಲ್ಲಿ ನುಸುಳುಕೋರರಿಂದ ಲೂಟಿ, ಭಯೋತ್ಪಾದನೆ, ಡಕಾಯಿತಿ ಮುಂತಾದ ಅಪರಾಧಿ ಕೃತ್ಯಗಳಲ್ಲಿ ಸೇರಿಕೊಂಡಿದ್ದಾರೆ. ಒಂದೆಡೆ ಈ ಕಳ್ಳ ನುಸುಳುವಿಕೆ ಗಂಭೀರ ಅಪಾಯವನ್ನು ತೊಂದೊಡ್ಡಿದ್ದರೆ ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅತ್ಯಾಚಾರಗಳು ನಿರಂತರ ನಡೆದಿದೆ.
ಹಿಂದು ಮಂದಿರಗಳನ್ನು ಒಡೆದು ಹಾಕುವುದು, ಮಹಿಳೆಯರ ಮೇಲೆ ಆತ್ಯಾಚಾರ, ಸಂಪತ್ತನ್ನು ಲೂಟಿ ಮಾಡುವುದು ಈ ಕೃತ್ಯಗಳಿಂದ ಬಾಂಗ್ಲಾದೇಶದಿಂದ ಹಿಂದುಗಳು ಓಡಿ ಹೋಗುವ ವಾತಾವರಣ ನಿರ್ಮಾಣವಾಗಿದೆ.
ಗುರುತಿಸುವ ವ್ಯವಸ್ಥೆ ಆಗಲಿ: ಭಾರತ ಸರ್ಕಾರವು ಸೂಕ್ತ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಬಾಂಗ್ಲಾದೇಶದ ಸರ್ಕಾರದ ಮೇಲೆ ಒತ್ತಡವನ್ನು ತಂದು ಹಿಂದುಗಳನ್ನು ಸುರಕ್ಷಿತರನ್ನಾಗಿ ಮಾಡಬೇಕಾಗಿದೆ. ಹಿಂದು ಶರಣಾರ್ಥಿ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಪ್ರತ್ಯೇಕವಾಗಿ ಸ್ಪಷ್ಟವಾಗಿ ಗುರುತಿಸುವ ವ್ಯವಸ್ಥೆ ಆಗಬೇಕಾಗಿದೆ.
ಬಾಂಗ್ಲಾದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದು, ಅವರಿಗೆ ಯಾವುದೇ ಸ್ಥಾನಮಾನ ರಕ್ಷಣೆ ಇಲ್ಲ, ಬದಲಾಗಿ ಅಪಮಾನ, ಆತ್ಯಾಚಾರ, ಕೊಲೆ, ಹಿಂಸೆಗಳು ನಡೆಯುತ್ತಿದೆ. ಗೋಹತ್ಯೆ, ದೇವಾಲಯಗಳ ದ್ವಂಸ, ಅತಿಕ್ರಮಣ, ದೌರ್ಜನ್ಯಗಳು ತಾಂಡವಾಡುತ್ತಿವೆ. ಭಾರತದ ಗಡಿ ಪ್ರದೇಶ ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ನಿರಂತರ ಒಳನುಸುಳುವಿಕೆ ನಡೆಯುತ್ತಿದೆ. ಹೇಳ- ಕೇಳುವವರಿಲ್ಲದಂತಾಗಿದೆ. ಗಡಿಯಲ್ಲಿ ನಿರ್ಮಿಸಲಾಗಿದ್ದ ತಂತಿಬೇಲಿಗಳು ದುರ್ಬಲ, ಶಿಥಿಲವಾಗಿದ್ದು ಭದ್ರತೆ ಕ್ಷೀಣಿಸಿದೆ.
ಹೆಚ್ಚಿನ ಅಧಿಕಾರ ನೀಡಿ: ಕೇಂದ್ರ ಸರ್ಕಾರ ಹಾಗೂ ಅಸ್ಸಾಂ ಸರ್ಕಾರಗಳು ಸ್ವಾರ್ಥದಿಂದ ಓಟಿನ ಭಿಕ್ಷೆಗಾಗಿ ನುಸುಳುಕೋರ ಬಾಂಗ್ಲಾ ಮುಸಲ್ಮಾನರಿಗೆ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ ನೀಡಿ ರಕ್ಷಣೆ ನೀಡುತ್ತಿದೆ. ಭಾರತದೊಳಗಿನ 3 ಕೋಟಿ ಬಾಂಗ್ಲಾ ನುಸುಳುಕೋರ ಮುಸಲ್ಮಾರನ್ನು ಗುರುತಿಸಿ ಹೊರಹಾಕಬೇಕು. ಗಡಿ ಭದ್ರತಾ ಸೈನಿಕರಿಗೆ ಶಕ್ತಿ ತುಂಬಿ ಹೆಚ್ಚಿನ ಅಧಿಕಾರ ನೀಡಬೇಕು. ಗಡಿ ಜಿಲ್ಲೆಗಳನ್ನು ಭದ್ರತೆಗೊಳಿಸಿ ಬಿಗಿ ಪಹರೆ ಹಾಕಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸಹ ಸಂಯೋಜಕ ಎ.ಜೆ. ಪಾರ್ಥಸಾರಥಿ, ಆರ್. ವಿಜಯ್ ಕುಮಾರ್ ಹಾಗೂ ಇತರರು ಇದ್ದರು.