ಮಸೀದಿ ಬಳಿ ಮದ್ಯದಂಗಡಿ ಎತ್ತಂಗಡಿ ಮಾಡಲು ಆಗ್ರಹ
ಹಾಸನ: ಮಸೀದಿ ಸಮೀಪವೇ ಇರುವ ಮದ್ಯದ ಅಂಗಡಿಯನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಬೇಲೂರಿನ ನಾನಾ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಬೇಲೂರು ಪಟ್ಟಣದ ಬಸವೇಶ್ವರ ಬೀದಿಯಲ್ಲಿದ್ದ ರೇಣುಕಾಂಬ ವೈನ್ನನ್ನು ನೆಹರು ನಗರಕ್ಕೆ ಸ್ಥಳಾಂತರ ಮಾಡಿದ್ದು, ಅಬಕಾರಿ ನಿಯಮದ 5ರ ವಿರುದ್ಧವಾಗಿದ್ದು, ಮಸೀದಿಯಿಂದ 90 ಮೀಟರ್ ದೂರದಲ್ಲಿದ್ದು, ಅಬಕಾರಿ ಅಧಿಕಾರಿಗಳು ಸರಿಯಾಗಿ ಅಳತೆ ಮಾಡದೆ ಮರೆ ಮಾಚುತ್ತಿದ್ದಾರೆ. ಆದ್ದರಿಂದ ಅಳತೆಗೆ ಬೇರೆ ಅಧಿಕಾರಿಗಳನ್ನು ನೇಮಿಸಿ ಅಳತೆ ಮಾಡಿಸಬೇಕೆಂದು ಪಟ್ಟು ಹಿಡಿದರು.
ಪ್ರಯೋಜನವಾಗದ ಮನವಿ: ಇಲ್ಲಿನ ಅಬಕಾರಿ ಇಲಾಖೆಗೆ ಭೇಟಿ ನೀಡಿ ನೆಹರು ನಗರದಲ್ಲಿನ ಮದೀನ ಮಸೀದಿ ಸಮೀಪ ತೆರೆದಿರುವ ಮಧ್ಯದಂಗಡಿಯನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಅಬಕಾರಿ ನಿರೀಕ್ಷಕ ಕೃಷ್ಣಮೂರ್ತಿಗೆ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮದ್ಯದಂಗಡಿಯನ್ನು ಮಸೀದಿ, ದೇವಸ್ಥಾನ, ಶಾಲಾ ಕಾಲೇಜುಗಳಿಂದ ನೂರು ಮೀಟರ್ಗಳಿಗಿಂತ ದೂರದಲ್ಲಿ ಇರಬೇಕು. ಆದರೆ ಮಸೀದಿಯಿಂದ ಅಳತೆ ಮಾಡಿದರೆ ಕೇವಲ 90 ಮೀಟರ್ ಮಾತ್ರ ಬರುತ್ತಿದೆ. ನಾವುಗಳು ಎಷ್ಟೆ ಹೇಳಿದರು ಅಬಕಾರಿ ಇಲಾಖೆ ಅಧಿಕಾರಿಗಳು ಮಸೀದಿ ಸಮೀಪವೇ ಮಧ್ಯದಂಗಡಿ ತೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆಂದು ಆರೋಪಿಸಿದರು.
ಅವಕಾಶ ಬೇಡ: ಈ ಮದ್ಯದಂಗಡಿಯ ಸುತ್ತ ಮುತ್ತಲು ಮುಸ್ಲಿಂ ಸಮೂದಾಯದವರು ಮತ್ತು ಬಡವರೆ ವಾಸ ಮಾಡುತ್ತಿರುವುದರಿಂದ ನೆಹರು ನಗರದ ಮದೀನ ಮಸೀದಿ ಸಮೀಪ ಯಾವುದೇ ಕಾರಣಕ್ಕೂ ಮದ್ಯದಂಗಡಿಗೆ ಅವಕಾಶ ಮಾಡಿಕೊಡಬಾರದು. ಅಲ್ಲದೆ ಇಲ್ಲಿ 90 ಮೀಟರ್ ದೂರದಲ್ಲಿ ಇರುವುದರಿಂದ ಅಧಿಕಾರಿಗಳು ಸರಿಯಾಗಿ ಅಳತೆ ಮಾಡದೆ ತಮಗೆ ಬೇಕಾದ ರೀತಿಯಲ್ಲಿ ಅಳತೆ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿದರು.
ನಿಯಮಗಳ ಉಲ್ಲಂಘನೆ: ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ ಬಾರ್ ತೆರೆಯಲು ಅವಕಾಶ ಕೊಡಲಾಗಿದೆ. ರೇಣುಕಾಂಬ ಮದ್ಯದಂಗಡಿಯನ್ನು ನೆಹರೂ ನಗರಕ್ಕೆ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಅಬಕಾರಿ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಮಸೀದಿಯಿಂದ ಬಾರ್ವರೆಗೆ ಅಳತೆ ಮಾಡುವಾಗ ಸರಿಯಾದ ರೀತಿಯಲ್ಲಿ ಅಳತೆ ಮಾಡಿಲ್ಲ. ಅಬಕಾರಿ ಅಧಿಕಾರಿಗಳು ಅಳತೆ ಮಾಡುವಾಗ ಬಾರ್ನಿಂದ ಮಸೀದಿವರೆಗೆ ಪಾದಾಚಾರಿ ರಸ್ತೆಯನ್ನು ಅನುಸರಿಸಿ ಅಳತೆ ಮಾಡಿದ್ದಾರೆಂದು ಕಿಡಿಕಾರಿದರು.
ಅಬಕಾರಿ ಅಧಿಕಾರಿಗಳು ಬಾರ್ ಇರುವ ಕಟ್ಟಡದಿಂದ ಮಸೀದಿ ಹಾಗೂ ಸರ್ಕಾರಿ ಕಚೇರಿ 90 ಮೀಟರ್ ಅಂತರದಲ್ಲಿ ಇರುವುದು ಹಾಗೂ ಬಾರ್ ಗೋಡೆಗೆ ಹೊಂದಿಕೊಂಡತೆ ಮನೆಗಳಿದ್ದು ಇವೆಲ್ಲವನ್ನೂ ಮರೆಮಾಚಿ ಸತ್ಯಕ್ಕೆ ದೂರವಾದ ವರಿದಿ ಕಳಿಸಿದ್ದಾರೆ. ಈಗ ನೋಡಿದರೆ ಪಾದಾಚಾರಿ ರಸ್ತೆಯ ಮಾರ್ಗವಾಗಿ ಅಳತೆ ಮಾಡುವುದಾಗಿ ಹೇಳಿ ಮತ್ತೆ ನಮ್ಮನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಅಬಕಾರಿ ಇಲಾಖೆಯ ಮೇಲೆ ತಮಗೆ ನಂಬಿಕೆ ಹೋಗಿದ್ದು, ಕೂಡಲೇ ಉನ್ನತ ಅಧಿಕಾರಿಗಳು ಬಂದು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಮಾಹಿತಿ ನೀಡದೆ ಅಳತೆ: ಅಬಕಾರಿ ಇಲಾಖೆಯವರು ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡದೆ ಅಳತೆ ಮಾಡಿ ಮದ್ಯದಂಗಡಿ ತೆರೆಯುವುದಕ್ಕೆ ಆವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ, ಬೇಕಿದ್ದರೆ ಮಸೀದಿ ಸಮಿತಿಯವರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಅಳತೆ ಮಾಡಿ ತೋರಿಸಲಿ ಮತ್ತು ಬಡವರೆ ಹೆಚ್ಚಾಗಿ ವಾಸ ಮಾಡುವುದರಿಂದ ತುಂಬ ತೊಂದರೆಯಾಗುತ್ತದೆ. ಆದ್ದರಿಂದ ಅಧಿಕಾರಿಗಳು ಮದ್ಯದಂಗಡಿಯನ್ನು ಶೀಘ್ರವಾಗಿ ತೆರೆವುಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನೆಹರು ನಗರದ ಮದೀನ ಮಸೀದಿಯ ಅಧ್ಯಕ್ಷ ಅಹಮದ್ ಆಲಿ, ದಲಿತ ಸಂಘರ್ಷ ಸಮಿತಿ ತಾ ಪ್ರಧಾನ ಸಂಚಾಲಕ ಬಿ.ಎಲ್. ಲಕ್ಷ್ಮಣ್, ಸಯ್ಯದ್ ಹಿರ್ಷಾದ್, ಇಲಿಯಾಸ್, ಖಲೀಂ, ಮಹಮದ್ ಅಜಾಂ, ಕಾವಲು ಪಡೆ ತಾಲೂಕು ಅಧ್ಯಕ್ಷ ರವಿ ಹಾಗೂ ಇತರರು ಇದ್ದರು.