'ಮೊಬೈಲ್ ಮೋಡಿಯಲ್ಲಿ ಯುವಜನಾಂಗ'
ಹೊಳೆನರಸೀಪುರ: ಜನಪದ ಸಾಹಿತ್ಯ ಎಲ್ಲಾ ಸಾಹಿತ್ಯ ಪ್ರಕಾರಗಳ ಮೂಲವಾಗಿದ್ದು, ಜನಪದ ಸಾಹಿತ್ಯದಿಂದಲೇ ಎಲ್ಲಾ ಸಾಹಿತ್ಯಗಳು ಸೃಷ್ಟಿಯಾಗಿದ್ದರೂ, ಇಂದಿನ ಯುವ ಜನಾಂಗವು ಮೊಬೈಲ್ ಮೋಹದಿಂದ ಸಿನಿಮಾ ಹಾಡುಗಳೆಡೆಗೆ ಮಾತ್ರವೇ ಮೋಹಿತವಾಗುತ್ತಿರುವುದು ವಿಷಾದನೀಯ ಎಂದು ಹಳ್ಳಿಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಎಸ್. ಸಂಪತ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಳ್ಳಿಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಪದ ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಸಮುದಾಯ ಜನಪದ ಸಾಹಿತ್ಯವನ್ನು ಹೆಚ್ಚು ಹೆಚ್ಚು ಹಾಡುವುದರ ಮೂಲಕ ಮತ್ತು ಕೇಳುವುದರ ಮೂಲಕ ಈ ಸಾಹಿತ್ಯವನ್ನು ಮುಂದಿನ ತಲೆಮಾರಿಗೂ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಿಮ್ಮದಾಗಿದೆ ಎಂದು ಹೇಳಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ. ಶಿವರಾಜು ಮಾತನಾಡಿ, ಜನಪದ ಸಾಹಿತ್ಯ ಜನರ ಹುಟ್ಟಿನಿಂದಲೇ ಬಂದಿದ್ದು, ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಜನರು ತಮ್ಮ ನೋವು ನಲಿವುಗಳನ್ನು ತಮ್ಮ ಬದುಕಿನ ದೈನಂದಿನ ಚಟುವಟಿಕೆಗಳಲ್ಲಿ ಹಾಡಿನ ಮೂಲಕ ವ್ಯಕ್ತಪಡಿಸುತ್ತಿದ್ದರು ಎಂದರಲ್ಲದೇ, ಗ್ರಾಮೀಣ ಭಾಗದ ಸ್ತ್ರೀ ಪುರುಷರ ಬಾಯಲ್ಲಿ ಜನಪದ ಗೀತೆಗಳು ನಲಿಯುತ್ತಿದ್ದವು ಎಂದರು.
ಉತ್ತಮ ಹಾಡುಗಾರರಿಗೆ ಬಹುಮಾನಗಳನ್ನು ನೀಡಲಾಯಿತು. ಉಪನ್ಯಾಸಕ ವೃಂದದವರಾದ ಎಚ್.ಜೆ.ಬೋರಯ್ಯ, ಎಂ.ಎಸ್.ಮಂಜುನಾಥ್, ಎಂ.ಸಿ. ವಿನೋದ್ಕುಮಾರ್, ಕೆ. ಶಿವರಾಜು ಹಾಗೂ ಎಚ್.ಟಿ. ರವಿಕುಮಾರ್ ಜನಪದ ಗೀತೆ ಹಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು. ವಿದ್ಯಾರ್ಥಿನಿಯರಾದ ನಿಶ್ಚಿತ ಮತ್ತು ಚೈತ್ರ ಸ್ವಾಗತಿಸಿದರು. ಟಿ.ಎ. ರಾಣಿ ವಂದಿಸಿದರು, ಸ್ವಾಮಿಗೌಡ ನಿರೂಪಿಸಿದರು.