ವಿದ್ಯಾರ್ಥಿಗಳು ಇಷ್ಟಪಟ್ಟು ಕಲಿತರೆ ಉತ್ತಮ ಸಾಧನೆ
ಹಾಸನ: ವಿದ್ಯಾರ್ಥಿಗಳು ಕಷ್ಟಕರ ವಿಷಯಗಳನ್ನು ಇಷ್ಟಪಟ್ಟು ಕಲಿತರೆ ಉತ್ತಮ ಸಾಧನೆ ಮಾಡಬಹುದು ಎಂದು ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಅಭಿಪ್ರಾಯ ಪಟ್ಟರು. ನಗರದ ಮಂಗಳ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಗಣಿತ, ವಿಜ್ಞಾನ ಅಥವಾ ಆಂಗ್ಲ ವಿಷಯಗಳು ಕಬ್ಬಿಣದ ಕಡಲೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಈ ವಿಷಯಗಳನ್ನು ಪ್ರೀತಿಸಿ ಅಭ್ಯಸಿಸಿದಾಗ ಮಾತ್ರ ಯಶಸ್ಸು ಸಾಧಿಸಬಹುದು ಎಂದರು. ಸರ್ಕಾರಿ ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ನಾರಾಯಣ ಪ್ರಸಾದ್ ಉಪನ್ಯಾಸ ನೀಡಿದರು. ಮಾನಸಿಕ ತಜ್ಞ ಡಾ. ಶ್ರೀನಿವಾಸ್ ಮಾತನಾಡಿದರು. ಮಂಗಳ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಅಶೋಕ್ಗೌಡ ಅಧ್ಯಕ್ಷತೆ ವಹಿಸಿ, ದಕ್ಷಿಣ ಕನ್ನಡ ಮುಂತಾದ ಕಡೆ ದೊರಕುವ ಉತ್ತಮ ಶಿಕ್ಷಣ ಹಾಸನದಲ್ಲೂ ದೊರಕಲಿ ಎನ್ನುವ ಆಶಯದಿಂದ ಈ ಕಾಲೇಜನ್ನು ಆರಂಭಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ಪ್ರಸನ್ನ ಕೆ.ಎಂ. ಪ್ರಾಸ್ತಾವಿಕ ಭಾಷಣ ಮಾಡಿದರು. ಸುಮಾರು ಹದಿನೈದು ಪ್ರೌಢಶಾಲೆಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕ ದಯಾನಂದ್ ಸ್ವಾಗತಿಸಿದರು. ಅರುಣ್ ಕುಮಾರ್ ವಂದಿಸಿದರು.