ವಿಶ್ವಕರ್ಮರನ್ನು ಪ್ರವರ್ಗ 1ಕ್ಕೆ ಸೇರಿಸಲು ಆಗ್ರಹ
ಹಾಸನ: ಕುಶಲಕರ್ಮಿ ವಿಶ್ವಕರ್ಮರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು ಮತ್ತು ಈ ಜನಾಂಗವನ್ನು ಹಿಂದುಳಿದ 2ಎ ಪ್ರವರ್ಗದ ಬದಲಾಗಿ ಪ್ರವರ್ಗ 1ಕ್ಕೆ ಸೇರಿಸಬೇಕೆಂದು ಕರ್ನಾಟಕ ವಿಶ್ವಕರ್ಮ ಮಹಾಮಂಡಲ ರಾಜ್ಯಾಧ್ಯಕ್ಷ ಎಲ್. ನಾಗರಾಜಚಾರ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜ್ಯಾದ್ಯಂತ ಸುಮಾರು 35 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ನಮ್ಮ ವಿಶ್ವಕರ್ಮ ಜನಾಂಗ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಈ ದಿನಗಳಲ್ಲೂ ದೇಶದ ಬೆನ್ನೆಲುಬು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರೈತರಿಗೆ ಪ್ರತಿ ಬೆನ್ನೆಲುಬಾಗಿ ನಿಂತು ಕೃಷಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಾಗೂ ಪಂಚ ಕಸಬುಗಳಾದ ಬಡಗಿ, ಕಮ್ಮಾರಿಕೆ, ಎರಕದ ಕೆಲಸ, ರಥ ಶಿಲ್ಪ, ಆಭರಣ ಶಿಲ್ಪ, ಭವ್ಯ ವಿಗ್ರಹಗಳ ಕೆತ್ತನೆಗೆ ಕೆಲಸ ಹಾಗೂ ದೇವಾಲಯದ ನಿರ್ಮಾಣದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಶ್ವವಿಖ್ಯಾತರಾಗಿದ್ದಾರೆ. ತನ್ಮೂಲಕ ದೇಶದ ಹಿರಿಮೆಗೆ ಹಾಗೂ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಆದರೂ ಸಹ ಬೇಡಿಕೆಗಳು ಈಡೇರಿಲ್ಲ ಎಂದರು.
ಹೊಸ ಕಾನೂನು ಜಾರಿಯಾಗಲಿ: ಶಿಲ್ಪಕಲೆಗಳ ತವರೂರು ಎಂದು ಪ್ರಖ್ಯಾತವಾಗಿರುವ ಜಿಲ್ಲೆಯ ಬೇಲೂರಿನ ಚನ್ನಕೇಶವ ದೇವಾಲಯದ ಆವರಣದಲ್ಲಿ ದೇವಾಲಯ ನಿರ್ಮಿಸಿದ ಶಿಲ್ಪಿ ಅಮರಶಿಲ್ಪಿ ಚಕಣಾಚಾರಿಯ ಪ್ರತಿಮೆ ಸ್ಥಾಪನೆಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಸಮಾಜದ ಚಿನ್ನ, ಬೆಳ್ಳಿ ಕೆಲಸಗಾರರಿಗೆ ಪೊಲೀಸ್ ಇಲಾಖೆಯಿಂದ ನೀಡುವ ಅನಗತ್ಯ ಕಿರುಕುಳ ತಪ್ಪಿಸಲು ರಾಜ್ಯದ ಗೃಹ ಸಚಿವರು ತಕ್ಷಣ ಹೊಸ ಕಾನೂನು ಜಾರಿಗೆ ತರಬೇಕಾಗಿದೆ ಎಂದರು ಹೇಳಿದರು.
ಗ್ರಾಮೀಣ ಅಭಿವೃದ್ಧಿ ನಿಗಮಕ್ಕೆ ಕಳುಹಿಸಿ: ರಾಜೀವ್‌ಗಾಂಧಿ ಗ್ರಾಮೀಣ ವಸತಿ ಯೋಜನೆ ಕಚೇರಿಗೆ ರಾಜ್ಯಾದ್ಯಂತ ಸುಮಾರು 19 ಸಾವಿರ ಅರ್ಜಿಗಳನ್ನು ಸಲ್ಲಿಸಿ ಅನೇಕ ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗೆ, ಎಲ್ಲಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆಯಿಸಿ ಸಭೆಯಲ್ಲಿ ಅನುಮೋದನೆಗೊಳಿಸಿ ರಾಜೀವ್ ಗಾಂಧಿ ಗ್ರಾಮೀಣ ಅಭಿವೃದ್ಧಿ ನಿಗಮಕ್ಕೆ ಕಳುಹಿಸಬೇಕೆಂದು ವಿನಂತಿಸಲಾಗಿದೆ. ಈ ಪೈಕಿ ಹಾಸನ ಜಿಲ್ಲಾ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ 50 ಫಲಾನುಭವಿಗಳಿಗೆ ಕುಶಲಕರ್ಮಿಗಳ ವಿಶೇಷ ಅನುದಾನದಲ್ಲಿ ಸರ್ಕಾರದ ಆದೇಶದಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು 1 ಲಕ್ಷ ಅನುದಾನ ಸರ್ಕಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ವಿಷಾದದ ಸಂಗತಿ: ಈಗಾಗಲೇ ಹಾವೇರಿ ಮತ್ತು ಗದಗ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಾವೇರಿಯ 2824 ಅರ್ಜಿಗಳ ಪೈಕಿ 1544 ಫಲಾನುಭವಿಗಳಿಗೆ ಮತ್ತು ಗದಗ ಜಿಲ್ಲೆಯ 750 ಅರ್ಜಿಗಳ ಪೈಕಿ 350 ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಆಗಿರುವುದಕ್ಕೆ ಘನ ಸರ್ಕಾರವನ್ನು ಅಭಿನಂದಿಸುತ್ತೇವೆ. ಉಳಿದವುಗಳ ಬಗ್ಗೆ 2011ರಲ್ಲಿ ಜಿಲ್ಲಾಡಳಿತದ ಗಮನಕ್ಕೆ ರಾಜೀವ್‌ಗಾಂಧಿ ಗ್ರಾಮೀಣ ಅಭಿವೃದ್ಧಿ ನಿಗಮದವರು ತಂದಿದ್ದಾರೆ. ಆದರೂ ಸಹ ಕಾರ್ಯರೂಪಕ್ಕೆ ಬಾರದೆ ಇರುವುದು ವಿಷಾದದ ಸಂಗತಿ ಎಂದರು.
ಜೊತೆಗೆ ಈ ಜನಾಂಗವನ್ನು ಹಿಂದುಳಿದ 2ಎ ವರ್ಗದಿಂದ ಪ್ರವರ್ಗ 1ಕ್ಕೆ ಸೇರಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ಎಕರೆ ವಿಸ್ತೀರ್ಣದ ಜಮೀನು ಮಂಜೂರು ಮಾಡಬೇಕು. ಜನಾಂಗದ ಅಭಿವೃದ್ಧಿಗೆ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಂಗಡ ಪತ್ರದಲ್ಲಿ 5 ಕೋಟಿ ಮೀಸಲಿಟ್ಟಿರುವುದು ಶ್ಲಾಘಿಸಿದರು.
ಪಂಚ ಕಸುಬುದಾರರಿಗೆ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಶೀಘ್ರವೇ ಸಲಕರಣೆಗಳನ್ನು ಖರೀದಿಸಲು ಸರ್ಕಾರ ತಕ್ಷಣವೇ ಅನುದಾನ ಬಿಡುಗಡೆಗೊಳಿಸಿ ಇದರ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಡಿಸಿಗೆ ಮನವಿ: ಸುದ್ದಿಗೋಷ್ಠಿಯ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಂಕರಾಚಾರ್, ಯು.ಬಿ. ರಾಜು, ಸೂರ್ಯನಾರಾಯಣಚಾರ್, ಕೃಷ್ಣಾಚಾರ್, ಎಚ್.ವಿ. ಹರೀಶ್ ಇತರರು ಇದ್ದರು.