ಸಮರ್ಪಕ ಕುಡಿವ ನೀರಿಗೆ ಆಗ್ರಹ
ಹಾಸನ: ಸಮರ್ಪಕ ಕುಡಿವ ನೀರನ್ನು ಒದಗಿಸುವಂತೆ ಆಗ್ರಹಿಸಿ ಅರಸೀಕೆರೆ ತಾಲ್ಲೂಕ್ಜಾವಗಲಲ್ಹೋಬಳಿ ಅರಕೆರೆ ಗ್ರಾಪಂನ ಚಿಕ್ಕಲಿಂಗನಹಳ್ಳಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಸುಮಾರು 3 ತಿಂಗಳಿನಿಂದ ಚಿಕ್ಕಲಿಂಗನಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಅರೆಕೆರೆ ಗ್ರಾಮಪಂಚಾಯ್ತಿಗೆ ದೂರು ನೀಡಲಾಗಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿರುವುದಿಲ್ಲ ಎಂದು ದೂರಿದ ಅವರು, ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜನ ಜಾನುವಾರುಗಳು ಕುಡಿವ ನೀರಿರಾಗಿ ಹಾಹಾಕಾರ ಪಡುವಂತಾಗಿದೆ ಎಂದು ಅಲವತ್ತುಕೊಂಡರು. ತಾಪಂ ಅಧಿಕಾರಿ ಗಮನಕ್ಕೂ ತರಲಾಗಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚಿಗೆ ಕೊಳವೆ ಬಾವಿ ಕೊರೆಸಲಾಗಿದೆ. ಅದರಿಂದ ನೀರು ಬರದೆ ಅಂತರ್ಜಲ ಬತ್ತಿದೆ. ಆದ್ದರಿಂದ ಹೊಸದಾಗಿ ತಕ್ಷಣ ಮತ್ತೊಂದು ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಿಕ್ಕಲಿಂಗನಹಳ್ಳಿ ಗ್ರಾಮಸ್ಥರಾದ ಹೇಮಣ್ಣ, ರಾಮಚಂದ್ರಪ್ಪ, ನಿಂಗಯ್ಯ, ಭಾಗ್ಯಮ್ಮ, ಗಂಗಾಧರಯ್ಯ ಹಾಗೂ ಇತರರು ಇದ್ದರು.