ಕನ್ನಡ ಕೊಂದು ಇಂಗ್ಲಿಷ್ ಕಲಿಸಬೇಕೇ..?
ದಯಾಶಂಕರ ಮೈಲಿ
ಹಾಸನ: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ತಮ್ಮ ಅಂಕೆ ಸಂಕೆಯೊಳಗೆ ಕನ್ನಡ ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಕೆಲಸ ಮಾಡಿದ ಡಾ. ನಲ್ಲೂರು ಪ್ರಸಾದ್ ಜನಪದ ವಿದ್ವಾಂಸ ಅನ್ನುವುದಕ್ಕಿಂತ ಹೆಚ್ಚಾಗಿ ಕವಿ ಎನ್ನಬಹುದು.
67 ವರ್ಷ ವಯಸ್ಸಿನ ಡಾ. ಪ್ರಸಾದ್ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ನಲ್ಲೂರು ಗ್ರಾಮದವರು. ನಲ್ಲೂರು ದೊರೆ ಕಾಳಿ, ಗಂಗಡಿಕಾರ ವಕ್ಕಲಿಗರು ಕೃತಿಗಳು ಗ್ರಾಮದ ಸಂಸ್ಕೃತಿಯನ್ನು ಪರಿಚಯಿಸುವ ಜನಪರ ಕೃತಿಗಳಾದರೆ, ಸೋಲೆ ಮುಗಿಲು, ನವಿಲೆ ಜಾಗರ, ನಿನೆಂಬ ನಾನು ಕವನ ಸಂಕಲನಗಳನ್ನು ರಚಿಸಿದ್ದಾರೆ. ಬೆಂಗಳೂರಿನ ವಿವಿ ಪುರಂ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ನಲ್ಲೂರು, ಮೇಷ್ಟ್ರು ವೃತ್ತಿಯಲ್ಲಿ ಹೆಚ್ಚು ಆನಂದ ಅನುಭವಿಸಿದವರು. ಪಾಠ ಮಾಡುವುದು ಅವರಿಗೆ ಪರಮ ಪ್ರಿಯ. ಹೋಬಳಿ ಮಟ್ಟದಲ್ಲಿ ಸಮ್ಮೇಳನವನ್ನು ನಡೆಸುವ ಮೂಲಕ ಸಾಹಿತ್ಯವನ್ನು ಹಳ್ಳಿಗಾಡಿಗೆ ತಲುಪಿಸಲು ಶ್ರಮ ಹಾಕಿದವರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗೊಮ್ಮಟ ಪ್ರಶಸ್ತಿ ಸೇರಿದಂತೆ ಆನೇಕಾನೇಕ ಪ್ರಶಸ್ತಿಗಳನ್ನು ಪಡೆದಿರುವ ನಲ್ಲೂರು ಕನ್ನಡ ಉಳಿಸಿ, ಬೆಳೆಸುವ ಕಾಯಕದಲ್ಲಿ ಮುಳಗಿ, ಅದಕ್ಕಾಗಿ ಅವಿರತ ಸೇವೆ ಸಲ್ಲಿಸುತ್ತಿರುವ ಸೌಮ್ಯ ಸ್ವಭಾವದ ಕನ್ನಡದ ಕಟ್ಟಾಳು. ಶುಕ್ರವಾರ ನಡೆಯಲಿರುವ ಹಾಸನ ಜಿಲ್ಲಾ 14 ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವ ನಲ್ಲೂರು ಪ್ರಸಾದ್ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ್ದಾರೆ.
ಪ್ರಶ್ನೆ- ಕೇಂದ್ರ ಸಾಹಿತ್ಯ ಪರಿಷತ್ ಸ್ಥಾಪನೆ ಆಗಿ 2014 ಕ್ಕೆ ಶತಮಾನ ಆಗಿದೆ. ಆದರೂ ಇನ್ನೂ ರಾಜ್ಯ, ಜಿಲ್ಲಾ ಸಾಹಿತ್ಯ ಸಮ್ಮೇಳನ ಸೇರಿದಂತೆ ಆನೇಕ ಕಾರ್ಯಕ್ರಮಗಳ ಮೂಲಕ ಕನ್ನಡ ಉಳಿಸಿ ಎಂಬ ಕೂಗು ಅನಿವಾರ್ಯ ಆಗಿದೆಯಲ್ಲ.
ಉತ್ತರ- ಇದಕ್ಕೆ ಮುಖ್ಯವಾದ ಕಾರಣ, ಕನ್ನಡಪರ ಯೋಜನೆಗಳನ್ನು ಕಾರ್ಯಗತ ಮಾಡುವ ಆಡಳಿತ ನಡೆಸುವವರಲ್ಲಿ ನಿರೀಕ್ಷಿತ ಮಟ್ಟದ ಇಚ್ಚಾಶಕ್ತಿ ಕೊರೆ ಇರುವುದು. ಸರ್ಕಾರಗಳ ಜೊತೆಗೆ ಜನತೆಗೂ ಕನ್ನಡ ಪರವಾದ ಬದ್ದತೆ ಇರಬೇಕಾಗುತ್ತದೆ. ಅಲ್ಲದೇ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತರಲೇಬೇಕಾಗಿದೆ. ಏಕರೂಪ ಶಿಕ್ಷಣ ನೀತಿ ತಂದರೆ ಅನಿವಾರ್ಯವಾಗಿ ಶಾಲೆ, ಕಾಲೇಜುಗಳಲ್ಲಿ ಒಂದೇ ಭಾಷೆಯನ್ನು ಕಲಿಯುವುದು ಅನಿವಾರ್ಯ. ಕನ್ನಡ ಸಮ್ಮೇಳನಗಳು ನಿರಂತರವಾಗಿ ನಡೆಸುವ ಮೂಲಕ ಕನ್ನಡ ಉಳಿಸಿ ಕೂಗನ್ನು ಹಾಕಲೇಬೇಕಾಗುತ್ತದೆ.
ಪ್ರಶ್ನೆ- ಕನ್ನಡ ಭಾಷೆ ಅನ್ನ ಅರ್ಥಾತ್ ಉದ್ಯೋಗ ದೊರಕಿಸಿಕೊಡುವ ಭಾಷೆಯಾಗದಿದ್ದರೇ ಕನ್ನಡ ಉಳಿಯುವುದಾದರೂ ಹೇಗೆ..?
ಉತ್ತರ- ಖಂಡಿತಾ. ಆ ಬಗ್ಗೆ ಎರಡನೇ ಮಾತಿಲ್ಲ. ಕನ್ನಡ ಕಲಿತರೆ, ಓದಿದರೇ ಬದುಕು ಹಸನನಾಗುತ್ತದೆ ಎಂಬ ಭರವಸೆ ಮೂಡಿಸಲೇಬೇಕಾಗಿದೆ. ಇತ್ತೀಚೆಗೆ ಗ್ರಾಮಗಳ ಜನರಲ್ಲಿ ಕಾನ್ವೆಂಟ್ ಸಂಸ್ಕೃತಿ ಬೆಳೆಯಲು ಕಾರಣ ಇಂಗ್ಲೀಷ್ ಕಲಿತರೇ ಉದ್ಯೋಗ ಸುಲಭವಾಗಿ ಸಿಗುತ್ತದೆ ಎಂಬ ಆಸೆಯ ಹಿನ್ನೆಲೆಯಲ್ಲಿಯೇ. ಕನ್ನಡ ಒಂದು ಸಂಸ್ಕೃತಿ ಎಂಬ ಅಭಿಮಾನವೂ ಇರಬೇಕು. ಒಂದು ಪ್ರಾದೇಶಿಕ ಭಾಷೆ ಅನ್ನ ಕೊಡುವುದರ ಜೊತೆಗೆ ಅಭಿಮಾನದ ಭಾಷೆಯಾಗಬೇಕು. ಭಾರತ ಹತ್ತು ಹಲವು ಸಂಸ್ಕೃತಿಯನ್ನು ಹೊಂದಿರುವ ವೈವಿಧ್ಯಮಯ ದೇಶ. ಭಾಷೆಯ ನೆಲೆಯಲ್ಲೇ ಒಂದು ಸಂಸ್ಕೃತಿ ಹುಟ್ಟುತ್ತದೆ.
ಪ್ರಶ್ನೆ- ಕನ್ನಡ ಸಮ್ಮೇಳನಗಳನ್ನು ಸಾಹಿತ್ಯ ಪರಿಷತ್ತೇ ಏಕೆ ಮಾಡಬೇಕು
ಉತ್ತರ- ಪರಿಷತ್ತೇ ಮಾಡಬೇಕು ಅಂದೇನು ಇಲ್ಲ. ಆಳ್ವ ನುಡಿ ಸಿರಿ, ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ಕನ್ನಡ ಕಾರ್ಯಕ್ರಮಗಳನ್ನು ಪರಿಷತ್ತೇತರ ಸಂಸ್ಥೆಗಳು ನಡೆಸಿವೆ. ಸಾಹಿತ್ಯ ಪರಿಷತ್ ಕನ್ನಡಿಗರ ಪ್ರತಿನಿಧಿಕ ಸ್ವರೂಪ. ಸಮಸ್ತ ಕನ್ನಡಿಗರು ಕಣ್ಣು. ಇದಕ್ಕೂ ಇತಿಮಿತಿ ಇದೆ. ಯೋಜನೆಗಳನ್ನು ರೂಪಿಸಬಹುದೇ ಹೊರತು ಕಾರ್ಯಗತ ಮಾಡುವುದು ಸರ್ಕಾರಗಳದ್ದು. ಅದಕ್ಕಾಗಿ ಹಿಂದೆನೇ ನಾನು. ಆಳುವವರಿಗೆ ಕನ್ನಡ ಪರತೆ, ಇಚ್ಛಾಶಕ್ತಿ, ಬದ್ಧತೆ ಇರಬೇಕು ಎಂದು ಹೇಳಿದ್ದು.
ಪ್ರಶ್ನೆ- ರಾಜ್ಯ ಮತ್ತು ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದವರ ಮಕ್ಕಳು, ಮೊಮ್ಮಕ್ಕಳೇ ಇಂಗ್ಲಿಷ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಉತ್ತರ- ಜಾಗತಿಕರಣದ ಸಂದರ್ಭದಲ್ಲಿ ಬೇರೆ ಭಾಷೆಯನ್ನು ತಿರಸ್ಕರಿಸಲ್ಲಿಕೆ ಆಗದು. ಹಾಗೆಂದು ಕನ್ನಡವನ್ನು ಕೊಂದು ಇಂಗ್ಲಿಷ್ ಕಲಿಸಬೇಕು ಎಂಬುದನ್ನು ಒಪ್ಪಲು ಸಾಧ್ಯವೇ ಇಲ್ಲ. ಇಂಗ್ಲಿಷ್ ಕಲಿಯಬೇಕು. ಅದರೆ ತಲೆ ಮೇಲೆ ಹೊತ್ತುಕೊಂಡು ಮೆರೆಯುವುದು ಬೇಡ. ಇಂಗ್ಲಿಷ್ ಸಹವಾಸದಿಂದ ಕನ್ನಡ ಕೆಡುವುದು ಬೇಡ. ಕನ್ನಡ ಉಳಿಬೇಕು. ಬೆಳೆಯಬೇಕು ಎಂದು ವೇದಿಕೆಗಳಲ್ಲಿ ಭಾಷಣ ಮಾಡುವವರು ತಮ್ಮ ಮನೆಯನ್ನು ಕನ್ನಡತನವನ್ನು ಮೆರೆಸಬೇಕು. ಇದು ಸ್ವಯಂ ಪ್ರೇರಣೆಯಿಂದ ಬರಬೇಕು.
ಪ್ರಶ್ನೆ- 1992 ರಲ್ಲಿ ಸ್ಥಾಪಿತವಾದ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದ್ದವರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಕಾವಲು ಸಮಿತಿ ಈಗ ಕನ್ನಡ ಅಭಿವೃಧ್ಧಿ ಪ್ರಾಧಿಕಾರ ಎಂದು ನಾಮಕರಣಗೊಂಡಿದೆ. ಇದು ಕೇವಲ ಸರ್ಕಾರ ನೀಡಿದ ಅನುದಾನದಿಂದ ವೆಚ್ಚ ಮಾಡುವುದಕಷ್ಟಕ್ಕೆ ಸೀಮಿತವಾಗಿದೆ ಎಂಬ ಅಸಮಾಧಾನವಿದೆ ಏನಂತ್ತೀರಿ?
ಉತ್ತರ- ಹೌದು. ಇಂದಿನ ಸಿಎಂ ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಹಾಗಾಗಿ ಅವರಿಗೆ ಕನ್ನಡದ ಸಮಸ್ಯೆಗಳೇನು. ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಗೊತ್ತಿದೆ. ಕೂಡಲೇ ಕೇಂದ್ರ ಸಾಹಿತ್ಯ ಪರಿಷತ್ ಆರ್ಥಿಕವಾಗಿ ಸ್ವಾವಲಂಭಿ ಆಗುವಂತೆ ಮಾಡಬೇಕಲ್ಲದೆ. ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಜಾರಿಗೆ ಮುತುವರ್ಜಿ ವಹಿಸಬೇಕು. ಪರಿಷತ್ ಕೆಲವರ ಸ್ವತ್ತಲ್ಲ. ಸಮಸ್ತ ಕನ್ನಡಿಗರ ಸ್ವತ್ತು. ಅಂತಿಮವಾಗಿ ಆಧುನಿಕ ತಂತ್ರಜ್ಞಾನಗಳ ವಿಚಾರಗಳನ್ನು ಪರಿಗಣಿಸಿಕೊಂಡು ಹೊಸ ಆಲೋಚನೆಗಳ ಆಕಾರವಾಗಿ ಪರಿಷತ್ ಸುಂದರವಾಗಿ ನಿಲ್ಲಬೇಕು.
ಪ್ರಶ್ನೆ- ಸಾರ್... ತಮಗೆ 'ಕನ್ನಡಪ್ರಭ'ದ ಅಭಿನಂದನೆಗಳು. ನೀವು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಈಗ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದೀರಿ ...
ಉತ್ತರ: ಜನಗಳ ಪ್ರೀತಿ ಇದೆಯಲ್ಲ ಅದು ದೊಡ್ಡದು. ನನ್ನ ತವರಿನ ಜನ ಮಾಡಿದ ಪ್ರೀತಿಯ ಒತ್ತಾಯಕ್ಕೆ ಇಲ್ಲ ಅನ್ನುವುದಕ್ಕಿಂತ ನನ್ನಿಂದ ಸಾಧ್ಯವಾಗುವುದಿಲ್ಲ. ರಾಜ್ಯಾಧ್ಯಕ್ಷರಾಗಿದ್ದವರು ಜಿಲ್ಲಾಧ್ಯಕ್ಷರಾಗುವುದು ಸರಿಯಲ್ಲ ಎಂದೇಳುವುದು ಒಪ್ಪುವ ವಿಚಾರಲ್ಲ. ಬೇಡ ಅನ್ನಲಿಕ್ಕೆ ಆಗದು. ಕನ್ನಡದ ವಿಷಯದಲ್ಲಿ ಇದು ಸಣ್ಣದು, ಅದು ದೊಡ್ಡ ಎಂಬ ಭೇದ ಸರಿಯಲ್ಲ. ಹಿಂದೆ ಚಂಪಾ ಅವರೂ ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು.