ಬೆಂಬಲ ಬೆಲೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ಹಾಸನ ಫೆ.27
ಅನ್ನದಾನ ಬೆಳೆಗೆ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಮಾಡುವಂತೆ ರೈತ ಮುಖಂಡ ಎಚ್.ಟಿ. ಹುಚ್ಚಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2011 ರಿಂದ ಇಲ್ಲಿವರೆಗೂ 123 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಆದರೆ ಇನ್ನು ಸರಿಯಾಗಿ ಪರಿಹಾರ ನೀಡಿಲ್ಲ.
ಮಳೆ ಇಲ್ಲದೆ ರೈತ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದ್ದು, ಬೆಳೆಗೆ ಬೆಂಬಲ ಬೆಲೆಯಾದರೂ ಸರ್ಕಾರ ನೀಡಬೇಕಾಗಿತ್ತು.
ರೈತರು ಬೆಳೆಗೆ ಹಾಕಿದಂತಹ ಕೂಲಿನೂ ಸಿಗದಂತಾಗಿದೆ. ದನ- ಕರುಗಳಿಗೆ ಮೇವಿಲ್ಲದಂತಾಗಿದ್ದು, ರೈತರು ಮಾಡಿದ ಸಾಲ ತೀರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣ ಎಂದರು.
ರೈತರು ಬೆಳೆದ ಬೆಳೆ ಸಂಪೂರ್ಣ ಸುಟ್ಟು ಹೋಗಿದ್ದು, ಸೂಕ್ತ ಬೆಂಬಲ ಬೆಲೆಗೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದು, 2012 ರಲ್ಲಿಯೇ ಕೋರ್ಟಿಗೆ ಹೋಗಲಾಗಿದೆ. ರೈತರ ಬೆಂಬಲ ಬೆಲೆ ಕುರಿತಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ನ್ಯಾಯಾಲಯ ನೋಟಿಸ್ ನೀಡಿದೆ. ಆದರೆ ಇನ್ನು ಅವರು ಸರಿಯಾಗಿ ಮಾಹಿತಿ ನೀಡಲ್ಲ ಎಂದು ಆರೋಪಿಸಿದರು.
ಕಳೆದ ಹಲವಾರು ವರ್ಷಗಳಿಂದ ಬರಗಾಲ ಬಂದು ರೈತರು ಸಂಕಷ್ಟಕ್ಕೆ ಸಿಲುಕಿ ಸಾಲ ತೀರಿಸಲು ಆಗುತ್ತಿಲ್ಲ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿ ಎಂಬುದು ರೈತ ಮುಖಂಡ ನಂಜುಂಡಸ್ವಾಮಿ ಕನಸು ಆಗಿತ್ತು. ವೈಜ್ಞಾನಿಕ ಬೆಲೆ ನಿಗದಿ ಮಾಡಲು ಸಾಧ್ಯವಾಗದಿದ್ದರೂ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದರು.