ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರುದ್ರಪಟ್ಟಣದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ದಂಧೆ

Rashmi Kasaragodu
Updated On : 28 Feb 2014, 1:01 am

ರಾಮನಾಥಪುರ: ಸಮೀಪದ ರುದ್ರಪಟ್ಟಣದಲ್ಲಿ ಮಿತಿ ಮೀರಿ ನಡೆಯುತ್ತಿರುವ ಮರಳು ದಂಧೆಗೆ ಕಾವೇರಿ ನದಿಯ ದಡವನ್ನು ಜೆಸಿಬಿಗಳಿಂದ ಸಿಕ್ಕಾಪಟ್ಟೆ ಬಗೆದು ಮರಳು ತುಂಬುವ ವಾಹನಗಳು ಓಡಾಡಲು ಅನುಕೂಲವಾಗುವಂತೆ ಮಾಡುತ್ತಿರುವುದರಿಂದ ನದಿಯ ಪಾತ್ರ ಹಾಳಾಗಿ ಹೋಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಅಸಮರ್ಥರಾಗಿದ್ದಾರೆಂದು ಸ್ಥಳೀಯರಾದ ಆರ್.ಟಿ. ಶ್ರೀನಿವಾಸ್ ಆರೋಪಿಸಿದ್ದಾರೆ.
  ಇತ್ತೀಚೆಗೆ ಕಾವೇರಿ ನದಿಯ ಪಾತ್ರ ಮರಳು ದಂಧೆಯಿಂದಾಗಿ ಹಾಳಾಗಿ ಹೋಗುತ್ತಿರುವುದಲ್ಲದೆ, ಈ ಭಾಗದ ಕೆಲವು ಮಂದಿ ಈ ಮರಳು ದಂಧೆಯನ್ನೇ ಮುಖ್ಯ ಕಸಬನ್ನಾಗಿಸಿಕೊಂಡು ಬೆಳಿಗ್ಗೆಯಿಂದ ಸಂಜೆಯವರೆಗೂ ಅಕ್ರಮವಾಗಿ ಮರಳು ತೆಗೆಯುತ್ತಾ ತಮ್ಮನ್ನೇ ತೊಡಗಿಸಿಕೊಂಡು ಹಾಡು ಹಗಲೇ ಟ್ರ್ಯಾಕ್ಟರ್, ಲಾರಿಗಳಲ್ಲಿ ಮರಳು ಹೊಡೆಯುತ್ತಿದ್ದಾರೆ.
ರಾಜಮರ್ಯಾದೆಯಿಂದ ಬೀಳ್ಕೊಡುಗೆ: ಎಲ್ಲೋ ಒಮ್ಮೊಮ್ಮೆ ಎದುರಿಗೆ ಸಿಗುವ ಅಧಿಕಾರಿಗಳು ಮರಳು ತುಂಬಿದ ವಾಹನಗಳನ್ನು ಹಿಡಿದು ಜನರೆದುರು ಪ್ರಾಮಾಣಿಕತೆ ಪ್ರದರ್ಶಿಸುವ ಸೋಗಿನಲ್ಲಿ ಕಂಡುಬಂದು ಮರಳು ದಂಧೆಯವರಿಂದ ಹಣ ಪಡೆದು ಪೆನಾಲ್ಟಿ ನೆಪಮೊಡ್ಡಿ ಮರಳು ಸಹಿತ ವಾಹನಗಳನ್ನು ರಾಜಮರ್ಯಾದೆಯಿಂದ ಬೀಳ್ಕೊಡುವರು. ಸಂಬಂಧಿಸಿದ ಅಧಿಕಾರಿ ವರ್ಗದವರು ಕಾವೇರಿ ನದಿ ಪಾತ್ರದಲ್ಲಿ ಈ ರೀತಿ ಮರಳು ತೆಗೆಯುತ್ತಿರುವ ನದಿ ದಂಡೆಯ ಜಮೀನಿನ ಮಾಲೀಕರಿಗೆ ಎಷ್ಟು ನೋಟಿಸ್ ನೀಡಿರುವರು. ಮರಳು ತೆಗೆದು ಯುಪಿ ಯಿಂದ ದಿನಗೂಲಿಗಳನ್ನು ಕರೆಸಿದ್ದು, ಈ ಅಧಿಕಾರಿಗಳು ಎಷ್ಟು ಜನರ ಮೇಲೆ ಕೇಸು ದಾಖಲಿಸಿ ಬಂಧಿಸಿರುವರು.   ಎಷ್ಟು ಮರಳು ತುಂಬಿದ ವಾಹನಗಳು ನ್ಯಾಯಾಲಯಕ್ಕೆ ದಂಡ ಕಟ್ಟಿ ನ್ಯಾಯಾಲಯದ ಆದೇಶ ಪಡೆದು ತಮ್ಮ ವಾಹನಗಳನ್ನು ಬಿಡುಗಡೆ ಪಡೆದಿದ್ದಾರೆ. ಅಧಿಕಾರಿಗಳಿಂದ ಇದಕ್ಕೆ ಉತ್ತರ ದೊರೆಯುವುದೆ ಇಲ್ಲ.
ಎಗ್ಗಿಲ್ಲದೆ ಮುಂದುವರೆದ ಮರಳು ದಂಧೆ: ಏಕೆಂದರೆ ಸಮಾಜದ ಕಣ್ಣೊರೆಸುವ ನಾಟಕ ಪ್ರದರ್ಶಿಸುತ್ತಾ ತೆರೆ ಹಿಂದೆ ಇವರೇ ಉತ್ತೇಜಕರಾಗಿರುವುದು ಈ ರೀತಿ ದಿನೇದಿನೇ ಎಗ್ಗಿಲ್ಲದೆ ಮರಳು ದಂಧೆ ಮುಂದುವರೆಯುತ್ತಿರುವುದೇ ಕಾರಣ. ಒಂದು ವೇಳೆ ಅಧಿಕಾರಿಗಳು ಶಿಸ್ತಿನ ಸಿಪಾಯಿಗಳಾದರೆ ರಾಜಕೀಯ ವ್ಯಕ್ತಿಗಳ ಕ್ರೌರ್ಯಕ್ಕೆ ಸಿಲುಕಿ ತಮ್ಮ ಕರ್ತವ್ಯವನ್ನು ಬದಿಗೊತ್ತಿ ಅವರ ಇಷ್ಟಾನುಸಾರವಾಗಿ ಸಮಾಜಘಾತುಕ ಶಕ್ತಿಗಳೊಂದಿಗೆ ಕೈಜೋಡಿಸಬೇಕು. ಇಲ್ಲ ಪರ ಊರಿಗೆ ವರ್ಗಾವಣೆಯಾಗಬೇಕು.
ಅಡ್ಡಿ ಆತಂಕವಿಲ್ಲದೆ: ಸಂಬಂಧಪಟ್ಟ ಇಲಾಖೆಗಳಿವೆಯೇ ಹೊರತು, ಆದರೆ ಯಾವುದೇ ದಿಟ್ಟ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುತ್ತಿಲ್ಲ. ಸ್ಥಳೀಯ ರುದ್ರಪಟ್ಟಣದ ಗ್ರಾಮ ಪಂಚಾಯ್ತಿ ಸದಸ್ಯ ಗೋವಿಂದ ಎಂಬಾತ ಈ ಮರಳು ದಂಧೆಯಲ್ಲಿ ತೊಡಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಿದೆ. ತಮಗೆ ಸಂಬಂಧಿಸಿದ ಅಧಿಕಾರಿ ವರ್ಗಗಳ ಬೆಂಬಲವಿರುವುದಾಗಿ ಈ ರೀತಿ ಮರಳು ದಂಧೆಯಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಮುಂದುವರಿಯಲು ಸಾಧ್ಯ ಎನ್ನುತ್ತಾನೆ.
  ನದಿ ಪಾತ್ರದಲ್ಲಿರುವ ರಾಮನಾಯಕನ ಜಮೀನಿನಲ್ಲಿ ನದಿಗೆ ಮರಳಿನ ವಾಹನಗಳು ಇಳಿಯಲು ಅನುಕೂಲವಾಗುವಂತೆ ದಾರಿ ನಿರ್ಮಿಸಿಕೊಂಡು ಮರಳು ಹೊಡೆಸುತ್ತಿರುವುದರಿಂದ ಇಲ್ಲಿನ ರಸ್ತೆಗಳು ಮತ್ತು ಕೊಲ್ಲಿಯ ಮೋರಿಗಳು ಹಾಳಾಗಿ ಹೋಗಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಆರ್.ಎಂ. ಕುಮಾರ್, ಹರೀಶ್, ಆರ್.ಕೆ. ಶ್ರೀನಿವಾಸ, ಆರ್.ಟಿ. ಗಿರೀಶ, ಧರ್ಮ, ರಮೇಶ್, ಸಂತೋಷ, ಆರ್.ಟಿ. ಕುಮಾರ ಈ ಆರೋಪದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement