ವಾಸ್ತವದಿಂದ ಯಯಾತಿ, ಹಯವದನ ಜನಪ್ರಿಯ
ಅರಸೀಕೆರೆ: ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಾಡ್ರವರ ಯಯಾತಿ ಮತ್ತು ಹಯವದನ ಎಂಬ ನಾಟಕಗಳು ಪುರಾಣ ಪುಣ್ಯಕಥೆಗಳಂತೆ ಕಲ್ಪಿತ ಕಥೆಯಾಗದೆ, ವಾಸ್ತವಕತೆಗೆ ತುಂಬಾ ಹತ್ತಿರವಾಗಿರುವ ಕಾರಣ ಹೆಚ್ಚಿನ ಜನಪ್ರಿಯತೆ ಪಡೆಯಲು ಸಾಧ್ಯ ಎಂದು ದಾವಣಗೆರೆ ಸಾಹಿತಿ ಆನಂದ್ ಋಗ್ವೇದಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿಜ್ಞಾನ ಪರಿಷತ್ ಮತ್ತು ಅರಸೀ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಪಟ್ಟಣದ ಅನಂತ ಸದ್ವಿದ್ಯ ಶಿಕ್ಷಣ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ರ ನಾಟಕಗಳ ಪ್ರಸ್ತುತತೆ ಎಂಬ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಭವ್ಯ ಭಾರತ ಇತಿಹಾಸದ ಪರ್ವದಲ್ಲಿ ಮಹಾಭಾರತ ಮತ್ತು ರಾಮಾಯಣ ಕಾವ್ಯಗಳು ಸೇರಿದಂತೆ 18 ಪುರಾಣಗಳನ್ನು ಕಾಣಬಹುದಾಗಿದೆ ಎಂದರು.
ಉತ್ತರಗಳು ಸಿಗುವುದು ಅಸಾಧ್ಯ: ಈ ಪುರಾಣಗಳು ಕೇವಲ ಕಾಲ್ಪನಿಕ ಕಥೆಯಾಗಿದ್ದು, ವಾಸ್ತವಕತೆಗೆ ದೂರವಾಗುವ ಕಾರಣ ಅನೇಕ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳು ಸಿಗುವುದು ಅಸಾಧ್ಯವಾಗಿದ್ದು, ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಜನರನ್ನು ಕಾಡುತ್ತಿವೆ. ಆದರೆ ವಿಚಾರವಂತರು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ ಕಾರ್ನಾಡ್ ಬರೆದಂತಹ ಸಾಹಿತ್ಯ ಮತ್ತು ಅನೇಕ ನಾಟಕಗಳ ಪೈಕಿ ಯಾಯಾತಿ ಮತ್ತು ಹಯವದನ ಸಮಾಜದ ವಾಸ್ತವಿಕತೆಗೆ ಸಮೀಪವಾಗಿದ್ದು, ಪರಸ್ಪರರಲ್ಲಿ ಭಾವನಾತ್ಮಕ ಸಂಬಂಧಗಳನ್ನು ಬೇಸೆಯುವ ಮೂಲಕ ವೈಜ್ಞಾನಿಕವಾದ ಚಿಂತನೆಗೆ ದಾರಿ ದೀಪ ಎಂದು ತಿಳಿಸಿದರು.
ನಂತರ ಸಾಹಿತಿ ಯೋಗಾನಂದ ಅವರು ಡಾ.ವಿ.ಕೃ.ಗೋಕಾಕರ ನಾಟಕಗಳ ಕುರಿತು ವಿಚಾರ ಗೋಷ್ಠಿ ನಡೆಸಿಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿ ಸಾಹಿತಿ ಸತೀಶ್ ಕುಲಕರ್ಣಿ ವಹಿಸಿದ್ದರು. ಸ್ಥಳೀಯ ಸಾಹಿತಿ ಎನ್.ಡಿ. ರಾಮಸ್ವಾಮಿ, ಅನಂತ ಸದ್ವಿದ್ಯ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಆರ್. ಅನಂತ್ಕುಮಾರ್ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಚ್.ಆರ್. ಸ್ವಾಮಿ, ಅರಸೀ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷೆ ಮಮತರಾಣಿ, ಕಾರ್ಯದರ್ಶಿ ಶಿಕ್ಷಕಿ ಮಮತ ಹಾಗೂ ಕಾಲೇಜಿನ ಪ್ರಾಚಾರ್ಯರು ಇದ್ದರು.