ಕರ್ನಾಟಕ ದ್ರೋಹಿಗಳ ಬಾಯಿ ಮುಚ್ಚಿಸಿ
ಕೆ. ಸಣ್ಣೇಗೌಡ ವೇದಿಕೆ: ಅಖಂಡ ಕರ್ನಾಟಕವನ್ನು ಛಿದ್ರಗೊಳಿಸಬೇಕೆನ್ನುವ ಕುತಂತ್ರಿಗಳ ಶಾಶ್ವತವಾಗಿ ಬಾಯಿ ಮುಚ್ಚಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಕನ್ನಡಪರ ಸಂಘಟನೆಗಳು ತಮ್ಮಲ್ಲಾ ಭಿನ್ನಾಭಿಪ್ರಾಯ ತೊರೆದು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಹಾಸನ ಜಿಲ್ಲಾ 14ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಕರೆ ನೀಡಿದ್ದಾರೆ.
ಶುಕ್ರವಾರ ಇಲ್ಲಿ ನಡೆದ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳಾನಾಧ್ಯಕ್ಷ ಸ್ಥಾನದಲ್ಲಿ ಮಾತನಾಡಿ, ಕನ್ನಡ ಭಾಷೆ ಪರಿಸ್ಥಿತಿ, ಗಡಿ ವಿವಾದ, ಜಲ ವಿವಾಹ ಸೇರಿದಂತೆ ಕನ್ನಡ ನೆಲದ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಬೆಳಕನ್ನು ಚೆಲ್ಲಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನ ಸಲಹೆ ನೀಡಿದರು.
ಸಹನೆಯನ್ನು ಕೆಣಕುತ್ತಲೇ ಇದ್ದಾರೆ: ಬೆಳಗಾವಿ ಗಡಿವಿವಾದ ಇಂದಿಗೂ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ. ಮೇಲಿಂದ ಮೇಲೆ ಎಂಇಎಸ್ ಶಾಸಕರು ಕನ್ನಡಿಗರ ಸಹನೆಯನ್ನು ಕೆಣಕುತ್ತಲೇ ಇದ್ದಾರೆ. ಸಾಂಬಾಜಿ ಪಾಟೀಲ್ ಕರ್ನಾಟಕ ಶವಯಾತ್ರೆ ನಡೆಸುತ್ತಾರೆ. ಉಮೇಶ್ ಕತ್ತಿ ಕರ್ನಾಟಕವನ್ನು ಒಡೆಯಬೇಕೆಂದು ಕರೆ ಕೊಡುತ್ತಾರೆ. ಈ ನಡುವೆ ಕೈ ಕಟ್ಟಿ ಕೂರುವುದು ತರವಲ್ಲ ಎಂದು ವಿಷಾದಿಸಿದರು.
ಐಕತ್ವವಾಗಿ ಹೋರಾಡಿ: ಇದಕ್ಕಾಗಿ ಕನ್ನಡ ಪರ ಸಂಘಟನೆಗಳು ತಮ್ಮೆಲ್ಲಾ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಐಕತ್ವವಾಗಿ ಹೋರಾಟ ನಡೆಸಲೇಬೇಕಿದೆ. ನದಿ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಮಹಾರಾಷ್ಟ್ರ ಮತ್ತು ತಮಿಳುನಾಡುಗಳು ಕೃಷ್ಣ, ಕಾವೇರಿ ನೀರಿಗಾಗಿ ಹಸಿದ ಗುಳ್ಳೆ ನರಿಗಳಂತೆ ಹೊಂಚುಹಾಕುತ್ತಲೇ ಇವೆ ಎಂದು ಖಂಡಿಸಿದರು.
ಒಂದೆ ಗಡಿ ವಿವಾದ, ಇನ್ನೊಂದೆಡೆ ಜಲವಿವಾದ, ಮತ್ತೊಂದೆಡೆ ಭಾಷಾ ವಿವಾದ ಹೀಗೆ ಕನ್ನಡ ಮತ್ತು ಕರ್ನಾಟಕವನ್ನು ನಿರಂತರವಾಗಿ ಕಾಡುತ್ತಿರುವ ಜಲ್ವಂತ ಸಮಸ್ಯೆಗಳ ಬಗ್ಗೆ ನಾವಿಂದು ಐಕ್ಯತೆಯ ಹೋರಾಟ ನಡೆಸಬೇಕಿದೆ ಎಂದರು. ಹೋರಾಟಗಳು ಕೇವಲ ಭಾವನಾತ್ಮಕ ಹೋರಾಟಗಳೆನಿಸದೆ, ಅತ್ಯಂತ ರಚನಾತ್ಮಕ ಹೋರಾಟಗಳಾಗಿ ರೂಪುಗೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಕನ್ನಡ ಒಂದು ಭಾಷೆಯಲ್ಲ: ಕನ್ನಡ ಎನ್ನವುದು ಅನೇಕರು ಭಾವಿಸುವಂತೆ ಕೇವಲ ಒಂದು ಭಾಷೆಯಲ್ಲ. ಕನ್ನಡವಷ್ಟೇ ಅಲ್ಲ ಸಾಮ್ರಾಜ್ಯಪಾಪಿಯ ಪ್ರತೀಕವಾಗಿ, ಹುಸಿ ಭ್ರಮೆಗಳ ಸಂಕೇತವಾಗಿ, ಜಾಗತೀಕರಣದ ಪೀಡೆಯಾಗಿ ವಿಜೃಂಭಿಸಲ್ಪಡುತ್ತಿರುವ ಇಂಗ್ಲಿಷ್ ಹೊರತುಪಡಿಸಿದರೆ ಎಲ್ಲ ಭಾಷೆಗಳೂ ಕೇವಲ ನುಡಿಗಳಲ್ಲ. ಅವು ಸಂಸ್ಕೃತಿಯ ಪ್ರತಿಬಿಂಬ. ಬಹುಸಂಸ್ಕೃತಿ ಮತ್ತು ಬಹುಭಾಷೆಗಳ ಯಜಮಾನಿಕೆ ಇರುವ ಇಂಡಿಯಾದ ಬೇರೆ ಬೇರೆ ರಾಜ್ಯಗಳಲ್ಲಿ ಆಚರಿಸಲ್ಪಡುವ ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಮಹಾನವಮಿ, ದೀಪಾವಳಿ, ಇಂತಹ ಹಬ್ಬಗಳ ಸ್ವರೂಪ ಒಂದೇ ಬಗೆಯಾಗಿ ಇರುವುದಿಲ್ಲ ಎಂದು ಹೇಳಿದರು.
ಬದುಕಿನ ಮೇಲೆ ಜಾಗತಿಕರಣ ದಾಳಿ: ಜಾಗತಿಕರಣವು ಇಂದು ನಮ್ಮೆಲ್ಲರ ಬದುಕಿನ ಮೇಲೆ ತೀವ್ರವಾದ ದಾಳಿ ನಡೆಸುತ್ತಿದೆ. ನಮ್ಮ ವೇಷಭೂಷಣಗಳು, ಆಚಾರ- ವಿಚಾರಗಳು, ನಡಾವಳಿಗಳ ಮೇಲಷ್ಟೇ ಅಲ್ಲದೆ ನಾವಾಡುವ ಭಾಷೆಯ ಮೇಲೆ, ಕುಡಿವ ನೀರಿನ ಮೇಲೆ, ದುಡಿದು ತಿನ್ನುವ ಅನ್ನದ ಮೇಲೂ ಲಗ್ಗೆ ಇಟ್ಟಿದೆ. ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರಾ ಎಂದು ಕುವೆಂಪು ಎಚ್ಚರಿಸಿ ಸುಮಾರು 50 ವರ್ಷ ಕಳೆದರೂ ನಾವಿನ್ನು ಎಚ್ಚರಗೊಂಡಿಲ್ಲ. ಕನ್ನಡವನ್ನು ಉಳಿಸಿಕೊಳ್ಳಲಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಹಾಸನಕ್ಕೆ ವಿಶ್ವವಿದ್ಯಾಲಯ ಬೇಕು: ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ವಿವಿ.ಗಳು ತಲೆ ಎತ್ತಿವೆ. ಹತ್ತಾರು ಕಿಲೋ ಮೀಟರ್ ದೂರದಲ್ಲಿ ಇರುವ ನೆರೆಹೊರೆಯ ಜಿಲ್ಲೆಗಳಲ್ಲಿ ಒಂದಲ್ಲ ಎರಡೆರಡು ವಿಶ್ವವಿದ್ಯಾಲಯಗಳಿವೆ. ಆದರೆ ಇದುವರೆಗೂ ಇಲ್ಲಿ ಒಂದೂ ವಿವಿ ಸ್ಥಾಪನೆಯಾಗದಿರುವುದು ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಕುವೆಂಪು ವೈಚಾರಿಕತೆಯ ನೆಲೆಗಟ್ಟು ಮತ್ತು ಬೇಂದ್ರೆ ಕಾವ್ಯ ಮಾರ್ಗ, ಶಿವರಾಮ ಕಾರಂತರ ಪ್ರಯೋಗಶೀಲತೆ, ಪೂರ್ಣಚಂದ್ರ ತೇಜಸ್ವಿಯವರ ಜಿಜ್ಞಾಸೆಯ ಮಾರ್ಗದಲ್ಲಿ ಬೆಳೆದು ಬಂದವನು. ಎಲ್ಲ ಒಳ್ಳೆಯದನ್ನು ಒಪ್ಪಿಕೊಂಡವನು. ಸದಾ ಶುಭ್ರ ಬದುಕನ್ನು ಬಾಳಿದವನು. ಶುಭ್ರತೆಗೆ ಶೀಲ ಶೌಚಗಳಿಗೆ ತಲೆಬಾಗಿದವನು. ಕುವೆಂಪು ಅವರ ಮುಗಿದಿರಲಿ ಕೈ ಮಣಿದಿರಲಿ ಮತ್ತೆ ಮಡಿಯಾಗಿರಲಿ ಬಾಳ್ವೆ ಎಂಬ ಸಿದ್ಧಾಂತದಲ್ಲಿ ವಿಶ್ವಾಸವಿಟ್ಟು ನಡೆದವನು ಎಂದು ಹೇಳಿಕೊಂಡರು.
ನಮ್ಮ ಹಾಸನ ಜಿಲ್ಲೆಯಲ್ಲಿ ಶ್ರವಣಬೆಳಗೊಳದ ಭವ್ಯತೆ ಇದೆ. ಬೇಲೂರು- ಹಳೇಬೀಡಿನ ರಮ್ಯತೆ ಇದೆ. ರುದ್ರಪಟ್ಟಣದ ಸಂಗೀತದ ನಾದವಿದೆ. ತಂಬೂರಿ ತಮಟೆ ತಾಳಗಳ ಮೇಳವಿದೆ. ಜನಪದ ಜಗತ್ತಿನ ಜೋಗುಳವಿದೆ. ರಾಜಕಾರಣದ ಧೀಶಕ್ತಿ ಇದೆ. ಸಾಹಿತ್ಯ ಸಂಸ್ಕೃತಿಯ ಸೊಬಗಿದೆ. ಹಾಸನಾಂಬೆಯ ಆಶೀರ್ವಾದವಿದೆ. ಹೌದು ಎಲ್ಲವಿದೆ ಇಲ್ಲಿ, ನಮ್ಮೀ ಹಾಸನದ ನೆಲದಲ್ಲಿ ಎಂದು ಹೇಳಿದರು.