ಕೃತಕ ಕಾಲಿನಿಂದ ಬದುಕು ರೂಪಿಸಿಕೊಳ್ಳಿ: ಡಾ. ದಿನೇಶ್
ಅರಸೀಕೆರೆ: ಮನುಷ್ಯನ ದೇಹದ ಪ್ರಮುಖ ಅಂಗಾಂಗಗಳಲ್ಲಿ ಕಾಲುಗಳು ಅತ್ಯವಶ್ಯಕವಾಗಿದ್ದು, ಆಕಸ್ಮಿಕ ಘಟನೆಗಳಲ್ಲಿ ತಮ್ಮ ಕಾಲುಗಳನ್ನು ಕಳೆದುಕೊಂಡಿರುವವರು ರೋಟರಿ ಸಂಸ್ಥೆ ನೀಡುತ್ತಿರುವ ಉಚಿತ ಕೃತಕ ಕಾಲುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಲು ತಾಲೂಕು ಆರೋಗ್ಯಾಧಿಕಾರಿ ಡಾ. ದಿನೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ಜೈಪುರ ಕಾಲು ಜೋಡಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ದೇಹದ ಇತರ ಅಂಗಗಳು ಪ್ರಾಮುಖ್ಯತೆ ಹೊಂದಿರುವಂತೆ ಕಾಲುಗಳು ಕೂಡ ಅಷ್ಟೇ ಅವಶ್ಯಕ. ಒಮ್ಮೆ ಕಳೆದುಕೊಂಡ ಕಾಲನ್ನು ಮತ್ತೊಮ್ಮೆ ಹಿಂಪಡೆಯಲು ಸಾಧ್ಯವಿಲ್ಲ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಪ್ರವೀಣ್ ಮಾತನಾಡಿದರು. ಇನ್ನರ್ ವೀಲ್ ಅಧ್ಯಕ್ಷೆ ಅನ್ನಲಕ್ಷ್ಮೀ, ಮುರುಳಿ ಮಾತನಾಡಿದರು. ವೇದಿಕೆಯಲ್ಲಿ ಸಂಧ್ಯಾ ವಿಶ್ವನಾಥ್, ಕೆ.ಪಿ.ವಿಶ್ವನಾಥ್, ರೋಟರಿ ಕಾರ್ಯದರ್ಶಿ ಮೋಹನ್ ಕುಮಾರ್, ಬಿಇಓ ಎಸ್.ಪಿ. ನಟರಾಜ್, ಡಾ. ಜಗದೀಶ್, ರಾಕೇಶ್ ಮಹ್ತಾ ಇದ್ದರು.
75ಕ್ಕೂ ಹೆಚ್ಚು ಮಂದಿಗೆ ಕರ್ನಾಟಕ ಮಾರ್ವಡಿ ಯೂತ್ ಫೆಡರೇಷನ್ ಸದಸ್ಯ ಮುರುಳಿ ಕೃತಕ ಕಾಲು ವಿತರಿಸಿದರು.