ನಾಳೆ ಗ್ರಾಪಂ ಚುನಾವಣೆ: ಮದ್ಯ ಮಾರಾಟ ನಿಷೇಧ
ಹಾಸನ: ಹಲವು ಕಾರಣಗಳಿಂದ ಬಾಕಿ ಉಳಿದಿರುವ ಖಾಲಿ ಇರುವ ಅರಕಲಗೂಡು ತಾಲೂಕಿನ ಕತ್ತಿಮಲ್ಲೇನಹಳ್ಳಿ, ವಿಜಾಪುರ ಅರಣ್ಯ, ಬನ್ನೂರು ಗ್ರಾಮ ಪಂಚಾಯ್ತಿಗಳು, ಅರಸೀಕೆರೆ ತಾಲೂಕಿನ ಶ್ಯಾನೆಗೆರೆ ಗ್ರಾಮ ಪಂಚಾಯ್ತಿ ಸದಸ್ಯರ ಸ್ಥಾನಗಳಿಗೆ ಮಾರ್ಚ್ 2ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು ಮಾರ್ಚ್ 5ರಂದು ಮತ ಎಣಿಕೆ ಮಾಡಲಾಗುವುದು.
ಚುನಾವಣೆ ಶಾಂತಿಯುತವಾಗಿ ನಡೆಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುಣಾವಣಾಧಿಕಾರಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮತದಾನ ನಡೆಯುವ ಗ್ರಾಪಂ.ಗಳ ವ್ಯಾಪ್ತಿಯಲ್ಲಿ ಮಾ.1ರಂದು ಬೆಳಿಗ್ಗೆ 7 ರಿಂದ 2ರ ಮಧ್ಯರಾತ್ರಿ 12 ರವರೆಗೆ ಮತ ಎಣಿಕೆ ದಿನವಾದ ಮಾ.5ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಚುನಾವಣಾ ಆಯೋಗದ ಸೂಚನೆಯಂತೆ ತಮಗೆ ದತ್ತವಾಗಿರುವ ಅಧಿಕಾರವನ್ನು ಬಳಸಿ ಅಬಕಾರಿ ನಿಯಮಗಳನ್ವಯ ಎಲ್ಲಾ ರೀತಿಯ ಮದ್ಯ ಮಾರಾಟ, ಸಂಗ್ರಹಣೆ, ಸರಬರಾಜು ಮತ್ತು ಸಾಗಣೆಯನ್ನು ನಿಷೇಧಿಸಿದ್ದಾರೆ.
ಇದೇ ರೀತಿ ಮತದಾನದ ದಿನವಾದ ಮಾ. 2ರಂದು ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯ ಕೆಂಗುರುಬರ ಹಟ್ಟಿಯಲ್ಲಿ ನಡೆಯುವ ಜಾತ್ರೆ ನಿಷೇಧಿಸಲಾಗಿದೆ.
ಮತದಾನಕ್ಕೆ ನಿಗದಿಪಡಿಸಿರುವ ದಾಖಲೆಗಳು: ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿರದ ಮತದಾರರು ಮಾ.2ರಂದು ನಡೆಯುವ ಗ್ರಾಪಂ ಚುನಾವಣೆಗಳಲ್ಲಿ ಈ ಕೆಳಕಂಡ 21 ದಾಖಲೆಗಳನ್ನು ಹಾಜರುಪಡಿಸಿ ಮತದಾನ ಮಾಡಬಹುದು.
ನಿಗದಿಪಡಿಸಿರುವ ದಾಖಲೆಗಳು: ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ರಾಜ್ಯಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್ ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿ, ಭಾವಚಿತ್ರವಿರುವ ನೋಂದಾಯಿತ ಡೀಡ್ಗಳು ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪಡಿತರ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪ್ರಮಾಣ ಪತ್ರಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ ಪಿಂಚಣಿ ಸಂದಾಯ ಆದೇಶಗಳಂತಹ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು, ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ ಅಂಗವಿಕಲರಿಗೆ ಸಕ್ರಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಮಾಜಿ ಯೋಧರ ಭಾವಚಿತ್ರವಿರುವ ಸಿಎಸ್ಡಿ ಕ್ಯಾಂಟೀನ್ ಕಾರ್ಡ್.
ಗಪರುತಿನ ಚೀಟಿ: ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್, ಮಹಾನಗರ ಪಾಲಿಕೆ, ನಗರಸಭೆ, ಗ್ರಾಪಂ.ಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ ಮೂಲಕ ಪಡಿತರ ಚೀಟಿ ಮತ್ತು ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್ ಕಾರ್ಮಿಕ ಮಂತ್ರಾಲಯ ಯೋಜನೆ).
9 ಸ್ಥಾನಗಳಿಗೆ ಅವಿರೋಧ ಆಯ್ಕೆ: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಫೆಬ್ರವರಿ 10ರಂದು ಜಿಲ್ಲೆಯ 14 ಗ್ರಾಪಂ.ಗಳ 14 ಕ್ಷೇತ್ರಗಳಲ್ಲಿ ತೆರವಾದ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿತ್ತು. ವೇಳಾ ಪಟ್ಟಿಯಂತೆ ಫೆಬ್ರವರಿ 12ರಂದು ಅಧಿಸೂಚನೆ ಹೊರಡಿಸಲಾಗಿತ್ತು.
ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಪಂ ಒಂದು ಸ್ಥಾನಕ್ಕೆ ನಿಗಧಿತ ಸಮಯದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಅರಕಲಗೂಡು ತಾಲೂಕಿನ ಸಂತೆ ಮರೂರು, ಅಗ್ರಹಾರ, ಬೇಲೂರು ತಾಲೂಕಿನ ಸವಾಸಿಹಳ್ಳಿ, ತೊಳಲು, ಕೋಗಿಲೆಮನೆ, ಮಲಸಾವರ, ಅರಸೀಕೆರೆ ತಾಲೂಕಿನ ನೇರ್ಲಿಗೆ ಗ್ರಾಮ ಪಂಚಾಯ್ತಿಗಳ ಅವಿರೋಧ ಆಯ್ಕೆ ನಡೆದಿದೆ.
ಉಳಿದಿರುವ ನಾಲ್ಕು ಸ್ಥಾನಗಳಿಗೆ 9 ಮಂದಿ ಸ್ಪರ್ಧಿಸಿದ್ದಾರೆ. ಇದಕ್ಕಾಗಿ ಮಾ.2 ರಂದು ಮತದಾನ ನಡೆಯಲಿದೆ. ಮಾ.5 ರಂದು ಬೆಳಿಗ್ಗೆ 8 ರಿಂದ ಆಯಾಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.