ರಾಮನ್‌ರಿಂದ ವಿಜ್ಞಾನ ಜಗತ್ತಿನಲ್ಲಿ ಭಾರತದೇ ಹೊಳಪು'
ಹಾಸನ: ಭಾರತ ದೇಶವನ್ನು ವಿಜ್ಞಾನ ಜಗತ್ತಿನಲ್ಲಿ ಹೊಳೆಯುವಂತೆ ಮಾಡಿದ ಮೊದಲ ವಿಜ್ಞಾನಿ ಸರ್.ಸಿ.ವಿ. ರಾಮನ್ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ತಾಲೂಕು ಅಧ್ಯಕ್ಷೆ ಮಮತ ಶಿವು ಹೇಳಿದರು.
ಇತ್ತೀಚೆಗೆ ನಗರದ ಉತ್ತರ ಬಡಾವಣೆಯ ಬಿಜಿವಿಎಸ್ ಸಭಾಂಗಣದಲ್ಲಿ ಉತ್ತರ ಬಡಾವಣಾ ಬಿಜಿವಿಎಸ್ ಘಟಕ ಸಮಿತಿಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾಮಕ್ಕಳಿಗಾಗಿ ಆಯೋಜಿಸಿದ್ದ ವಿಜ್ಞಾನ ರಸಪ್ರಶ್ನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲ ನೊಬೆಲ್ ಪಾರಿತೋಷಕ: ಭಾರತದ ಜಾತ್ಯಾತೀತ ಪರಂಪರೆಗೆ ವೈಜ್ಞಾನಿಕ ತಳಹದಿ ಹಾಕಿಕೊಟ್ಟ ಮಹಾನ್ ಮಾನವತಾವಾದಿ, ಅಪ್ಪಟ ದೇಶಪ್ರೇಮಿ ನೈಸರ್ಗಿಕ ವಿಜ್ಞಾನಿ ಸರ್.ಸಿ.ವಿ. ರಾಮನ್, ಅವರು ಭಾರತದ ನೆಲದಲ್ಲಿಯೇ, ಭಾರತದ ಸಲಕರಣೆಗಳನ್ನು ಉಪಯೋಗಿಸಿ ಬೆಳಕಿನ ಚದುರುವಿಕೆಯ ಕುರಿತು ಸಂಶೋಧನೆ ಕೈಗೊಂಡು ಭಾರತಕ್ಕೆ ಮಾತ್ರವಲ್ಲ ಇಡೀ ಏಷ್ಯಕ್ಕೆ ಮೊಟ್ಟ ಮೊದಲ ನೊಬೆಲ್ ಪಾರಿತೋಷಕವನ್ನು ವಿಜ್ಞಾನ ಜಗತ್ತಿಗೆ ತಂದು ಕೊಟ್ಟು ಜಗತ್ತಿನಲ್ಲಿ ಭಾರತದ ಸ್ಥಾನಮಾನವನ್ನು ಉತ್ತುಂಗಕ್ಕೇರಿಸಿದರು ಎಂದು ಬಣ್ಣಿಸಿದರು.
ದೇಶಕ್ಕೆ ಕೊಡುಗೆ: ತಮ್ಮ ಪಾರಿತೋಷಕದ ಹಣ ಮತ್ತು ಭಾರತ ಸರ್ಕಾರದ ನೆರವಿನಿಂದ ಭಾರತೀಯ ವಿಜ್ಞಾನ ಸಂಸ್ಥೆಯನ್ನು ತೆರೆದು ಸಾವಿರಾರು ವಿಜ್ಞಾನಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆಂದ ಅವರು ರಾಮನ್ ಜನ್ಮ ಶತಾಬ್ದಿಯ ವರ್ಷ 1988ರಲ್ಲಿ ಅವರು ತಮ್ಮ ನೋಬೆಲ್ ಪ್ರಬಂಧ ಮೊದಲು ಪ್ರಕಟಿಸಿದ ದಿನದಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಸಲು ತೀರ್ಮಾನಿಸಿ ಭಾರತ ಸರ್ಕಾರವು ಜಾರಿಗೊಳಿಸಿತು.
ವಿದ್ಯಾರ್ಥಿ ದಿಸೆಯಲ್ಲೇ ವೈಜ್ಞಾನಿಕ ಮನೋಧರ್ಮ ಬೆಳೆಸಿ ವಿಜ್ಞಾನದ ಪ್ರಗತಿಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಈ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಬಿಜಿವಿಎಸ್ ಘಟಕ ಖಜಾಂಚಿ ರೇಖಾ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಬಿಜಿವಿಎಸ್ ಘಟಕ ಸಹಕಾರ್ಯದರ್ಶಿ ಸಭಾ ನಿರೂಪಿಸಿದರು, ಸದಸ್ಯೆ ಭಾಗ್ಯ ವಂದಿಸಿದರು. ಹಾಸನ ನಗರದ ನಾನಾ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.