ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರ ಬಂಧನ
ಹಾಸನ: ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ನಗರದ ಕೆ.ಆರ್.ಪುರಂ ಬಡವಾಣೆ ವಾಸಿ ಜಯಶ್ರೀ (40), ನಂಜಪ್ಪ (61), ಮಂಜುಳ (45) ಮತ್ತು ಶೋಭಾ (30) ಎಂಬವರೇ ಬಂಧಿತರು. ಜಯಶ್ರೀ ಅವರ ಮನೆಯಲ್ಲಿ ವೇಶ್ಯಾವಾಟಿಕೆ ಹಲವು ದಿನಗಳಿಂದ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದು ಶುಕ್ರವಾರ ಮನೆಯ ಮೇಲೆ ದಾಳಿ ನಡೆಸಿ ಜಯಶ್ರೀ, ನಂಜಪ್ಪ, ಮಂಜುಳ ಮತ್ತು ಶೋಭಾ ಅವರನ್ನು ಬಂಧಿಸಿದ್ದಾರೆ. ಹಣದ ಆಸೆಗಾಗಿ ಇವರು ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿ ದಂಧೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಡಾವಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.