ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುಳ್ಳು ವೈದ್ಯಕೀಯ ಪತ್ರ ಆರೋಪ: ಮರು ತಪಾಸಣೆ

Rashmi Kasaragodu
Updated On : 28 Feb 2014, 11:34 am

ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಶಿಕ್ಷಕರು ಸರ್ಕಾರಿ ಸೇವೆಗೆ ಸೇರುವ ಸಂದರ್ಭದಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯನ್ನು ಪಡೆದಿರುವ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತರು ಜಿಲ್ಲಾ ಶಸ್ತ್ರ ಚಿಕಿತ್ಸಕರ ಮೂಲಕ ಸದರಿ ಶಿಕ್ಷಕರನ್ನು ಮರು ವೈದ್ಯಕೀಯ ತಪಾಸಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದಲೂ ಈ ವಿಷಯವು ತಾಲೂಕಿನ ಶಿಕ್ಷಕ ವಲಯದಲ್ಲಿ ಸಂಚಲನ ಮತ್ತು ಅಚ್ಚರಿಯನ್ನು ಮೂಡಿಸಿದ್ದು, ತಾಲೂಕಿನ ಕೆಲ ಶಿಕ್ಷಕರಿಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಳ್ಳುವ ಸಂದರ್ಭದಲ್ಲಿ ಅಂಗವಿಕಲರ ಕೋಟಾದಡಿಯಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರವನ್ನು ಅಂದಿನ ವೈದ್ಯಕೀಯ ಮಂಡಳಿಯ ಕೆಲವರ ಜೊತೆ ಶಾಮೀಲಾಗಿ ಹೆಚ್ಚಿನ ಪ್ರಮಾಣದ ಅಂಗವೈಕಲ್ಯವನ್ನು ನಮೂದಿಸಿ ನೀಡಿ ಸರ್ಕಾರಿ ಶಿಕ್ಷಕರ ಹುದ್ದೆಯನ್ನು ಗಿಟ್ಟಿಸಿದ್ದಾರೆ ಎನ್ನುವ ಅಂಶ ಹೊರಬಿದ್ದಿದೆ.
 ಇದರಿಂದಾಗಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ತಾಲೂಕಿನ ಬಹುತೇಕ ಶಿಕ್ಷಕರ ಭವಿಷ್ಯ ತೂಗುಯ್ಯಾಲೆಯಾಗುವುದು ನಿಶ್ಚಿತ ಎನ್ನುವ ಮಾತು ದಟ್ಟವಾಗಿ ಕೇಳಿತೊಡಗಿದೆ.
ಮರು ವೈದ್ಯಕೀಯ ತಪಾಸಣೆಗೆ: ಇಲಾಖೆಯ ಮೇಲಧಿಕಾರಿಗಳು ನೋಟಿಸ್ ನೀಡಿದ್ದರೂ ಕೂಡ, ಆರೋಪವನ್ನು ಎದುರಿಸುತ್ತಿರುವ ಸದರಿ 17 ಶಿಕ್ಷಕರಿಗೆ ಇದುವರೆಗೂ ಎರಡು ಬಾರಿ ಮರು ವೈದ್ಯಕೀಯ ತಪಾಸಣೆಗೆ ಹಾಜರಾಗದೇ ನಿರ್ಲಕ್ಷ್ಯ ವಹಿಸಿದ್ದರೆನ್ನಲಾಗಿದೆ.
    ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರ ಆದೇಶದ ಹಿನ್ನೆಲೆಯಲ್ಲಿ ಉಪ- ನಿರ್ದೇಶಕರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಫೆ.22 ರಂದು ಇನ್ನೊಂದು ಪತ್ರ ಬರೆದು ಮೇಲಧಿಕಾರಿಗಳಾದ ತಾವು ಆದೇಶ ನೀಡಿದ್ದರೂ ಕೂಡ ವೈದ್ಯಕೀಯ ಮಂಡಳಿಯ ಮುಂದೆ ಮರು ವೈದ್ಯಕೀಯ ತಪಾಸಣೆಗೆ ಹಾಜರಾಗದಿರುವುದು ಸರ್ಕಾರಿ ನೌಕರರಿಗೆ ತರವಲ್ಲದ ವರ್ತನೆಯಾಗಿದ್ದು, ಕರ್ನಾಟಕ ನಡತೆ ನಿಯಮಾವಳಿ ನಿಯಮ 3 ಉಪನಿಯಮ(1) (2) (3)ರ ಉಲ್ಲಂಘನೆಯಾಗಿರುತ್ತದೆ ಎಂದು ತಿಳಿಸಲಾಗಿದೆ. ಇದರಿಂದಾಗಿ ಸದರಿ ಶಿಕ್ಷಕರ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ನೋಟೀಸ್ ನೀಡಿ ಫೆ.26 ರಂದು ಕಡ್ಡಾಯವಾಗಿ ಜಿಲ್ಲಾ ವೈದ್ಯಕೀಯ ಮಂಡಳಿಯ ಮುಂದೆ 17 ಶಿಕ್ಷಕರು ಮರು ವೈದ್ಯಕೀಯ ತಪಾಸಣೆಗೆ ಹಾಜರಾಗುವಂತೆ ಆದೇಶಿಸಿದೆ.
ನಷ್ಟವನ್ನು ತುಂಬಿಕೊಡವ ಅನಿವಾರ್ಯತೆ: ಇದರಿಂದಾಗಿ ಈಗ ಅಂಗವಿಕಲರ ಕೋಟಾದಡಿಯಲ್ಲಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿ ಕೆಲಸ ಗಿಟ್ಟಿಸಿಕೊಂಡು ಈಗಾಗಲೇ 10-15 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ತಾಲೂಕಿನ ಕೆಲ ಶಿಕ್ಷಕರುಗಳ ಮೇಲಿನ ಆರೋಪವು ಸಾಬೀತಾದಲ್ಲಿ ಕೆಲಸ ಕಳೆದುಕೊಳ್ಳುವ ಜೊತೆಗೆ ಇದುವರೆಗೂ ಪಡೆಯಲಾಗಿರುವ ಸವಲತ್ತುಗಳನ್ನು ಮತ್ತು ಆಗಿರುವ ನಷ್ಟವನ್ನು ತುಂಬಿಕೊಡಬೇಕಾದ ಅನಿವಾರ್ಯತೆ ಎದುರಾದರೂ ಅಚ್ಚರಿಯಿಲ್ಲ ಎನ್ನುವ ಕಳವಳ ಇಲ್ಲಿನ ಶಿಕ್ಷಕ ವಲಯದಲ್ಲಿ ದಟ್ಟವಾಗಿದೆ.    ಒಂದು ಮಾಹಿತಿಯ ಪ್ರಕಾರವಾಗಿ ಶಿಕ್ಷಕ ಹುದ್ದೆಗೆ ನೇಮಕಗೊಳ್ಳುವ ಸಂದರ್ಭದಲ್ಲಿ ಅಂಗವಿಕಲ ಕೋಟಾದಡಿಯಲ್ಲಿ ಕೆಲಸ ಗಿಟ್ಟಿಸಲು ಸುಳ್ಳು ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿ ಕೆಲಸ ಪಡೆದಿರುವ ಶಿಕ್ಷಕರು ತಾಲೂಕಿನಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಲ್ಲಿ ಇಲಾಖೆಗೆ ಸುಳ್ಳು ಅಂಗವಿಕಲ ಪ್ರಮಾಣ ಪತ್ರವನ್ನು ನೀಡಿರುವ ಶಿಕ್ಷಕರು ಸುಮಾರು 35ಕ್ಕೂ ಹೆಚ್ಚಿದ್ದರೆ, ಇನ್ನುಳಿದವರು ಅಂಗವಿಕಲ ಕೋಟಾದಡಿಯಲ್ಲಿಯೇ ಕೆಲಸ ಪಡೆದಿದ್ದರೂ ಕೂಡ ಸರ್ಕಾರಿ ಸೇವೆಗೆ ನೇಮಕೊಂಡ ನಂತರ ತಮ್ಮ ಸೇವಾ ಪುಸ್ತಕದಲ್ಲಿ ತಮ್ಮ ಅಂಗವಿಕಲತೆ ಪ್ರಮಾಣ ಪತ್ರವನ್ನು ನಮೂದಿಸಿಲ್ಲ ಎನ್ನುವ ಅನುಮಾನ ಇಲ್ಲಿ ಹರಿದಾಡತೊಡಗಿದೆ.


17 ಶಿಕ್ಷಕರಿಗೆ ನೋಟಿಸ್




ಲೋಕಾಯುಕ್ತರ ಆದೇಶದಂತೆ ತಾಲೂಕಿನ 17 ಶಿಕ್ಷಕರುಗಳಿಗೆ ನೋಟಿಸ್ ಜಾರಿಗೊಂಡ ನಂತರ, ಶಿಕ್ಷಕ ವಲಯದಲ್ಲಿಯೇ ಕೆಲವರು ಅಂಗವಿಕಲ ಕೋಟಾದಡಿಯಲ್ಲಿ ನೇಮಕಗೊಂಡಿದ್ದರೂ ಕೂಡ, ಇಲಾಖೆಯಲ್ಲಿನ ಸೇವಾ ಪುಸ್ತಕದಲ್ಲಿ ತಮ್ಮ ಅಂಗವಿಕಲತೆಯನ್ನು ನಮೂದಿಸದಿರುವ ಸುಮಾರು 35ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಅವರುಗಳು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳ ಸಂಪೂರ್ಣ ವಿವರಗಳಿರುವ ಪಟ್ಟಿಯನ್ನು ಇಲ್ಲಿನ ಕೆಲ ವಕೀಲರಿಗೆ ಅನಾಮಧೇಯ ಹೆಸರಿನಲ್ಲಿ ಸಲ್ಲಿಸಿ ಅವರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸುವಂತೆ ಕೋರಿರುವ ಅಂಶ ಬೆಳಕಿಗೆ ಬಂದಿದ್ದು, ಇದರಿಂದಾಗಿ ಸರ್ಕಾರಿ ನೌಕರಿ ಪಡೆಯಲು ಕೆಲವು ಶಿಕ್ಷಕರು ಆಕ್ರಮ ಮಾರ್ಗಗಳನ್ನು ಅನುಸರಿಸಿರುವ ಅಂಶ ಬಯಲಾಗಿದೆ. ಈಗಾಗಲೇ ಇಡೀ ಜಿಲ್ಲೆಯಲ್ಲಿ ಇದೇ ರೀತಿ ಸುಳ್ಳು ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿ ಶಿಕ್ಷಕ ಹುದ್ದೆಯನ್ನು ಪಡೆದಿರುವವರ ಸಂಖ್ಯೆಯು 500 ಕ್ಕೂ ಹೆಚ್ಚು ಇದೆ ಎನ್ನಲಾಗಿದ್ದು, ಇದರಲ್ಲಿಯೂ ಸುಳ್ಳು ಪ್ರಮಾಣ ಪತ್ರವನ್ನು ಪಡೆದು ಇಲಾಖೆಯ ಸೇವಾ ಪುಸ್ತಕಕ್ಕೆ ನಮೂದಿಸದಿರುವವರ ಸಂಖ್ಯೆಯು ಇನ್ನಷ್ಟು ಹೆಚ್ಚಿನದ್ದಾಗಿದೆ ಎಂಬ ಅನುಮಾನ ಹೊರಬಿದ್ದಿದೆ.
   ಈ ಕುರಿತಂತೆ ದೊಡ್ಡ ಮಟ್ಟದ ತನಿಖೆಯೇನಾದರೂ ನಡೆದಲ್ಲಿ ಇಡೀ ರಾಜ್ಯದಲ್ಲಿಯೇ ಈ ರೀತಿ ನೌಕರಿ ಗಿಟ್ಟಿಸಿರುವವರ ದೊಡ್ಡ ಜಾಲವೇ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.



ಶಿಕ್ಷಕರ ಪಟ್ಟಿ
ಇತ್ತೀಚೆಗೆ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕಿನಡಿಯಲ್ಲಿ ಜಿಲ್ಲೆಯ ಸಾರ್ವಜನಿಕ ಉಪ- ನಿರ್ದೇಶಕರು ಹಾಗೂ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ತಾಲೂಕಿನಲ್ಲಿ ಅಂಗವಿಕಲರ ಕೋಟಾದಡಿಯಲ್ಲಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳ ಪಟ್ಟಿಯನ್ನು ಪಡೆದು, ಇದರಲ್ಲಿನ ಬಹುತೇಕ ಶಿಕ್ಷಕರ ಅಂಗವಿಕಲತೆಯ ಕುರಿತಂತೆ ಅನುಮಾನ ವ್ಯಕ್ತಪಡಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತರು ಜಿಲ್ಲಾ ಲೋಕಾಯುಕ್ತ ಉಪ- ಅಧೀಕ್ಷಕರಾದ ವೇದಮೂರ್ತಿ ಅವರನ್ನು ತನಿಖಾಧಿಕಾರಿಯಾಗಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ- ನಿರ್ದೇಶಕರ ಮೂಲಕ ಮೊದಲ ಹಂತದಲ್ಲಿ ತಾಲೂಕಿನ 17 ಶಿಕ್ಷಕರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರು ಅಥವಾ ಜಿಲ್ಲಾ ವೈದ್ಯಕೀಯ ಅಧೀಕ್ಷಕರ ಮುಂದೆ ಮರು ವೈದ್ಯಕೀಯ ತಪಾಸಣೆಗೆ ಹಾಜರಾಗಿ ವೈದ್ಯಕೀಯ ಧೃಡೀಕರಣ ಪತ್ರವನ್ನು ಒದಗಿಸಿಕೊಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement