ಮಧ್ಯವರ್ತಿಗಳು ಸಿಕ್ಕಿದರೆ ಕಂಬಕ್ಕೆ ಕಟ್ಟುತ್ತೇನೆ
ಚನ್ನರಾಯಪಟ್ಟಣ: ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಡುತ್ತೇನೆಂದು ನಂಬಿಸಿ ಹಣ ಕೀಳುವವರು ನನ್ನ ಕೈಗೆ ಸಿಕ್ಕಿದರೆ ಅವರನ್ನು ಕಂಬಕ್ಕೆ ಕಟ್ಟಿ ಮೆಣಸಿನಕಾಯಿ ಊದಲು ಹಾಕುತ್ತೇನೆ ಎಂದು ತಹಸೀಲ್ದಾರ್ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಅಂಗವಿಕಲರಿಗೆ ಹಾಗೂ ರಾಷ್ಟ್ರೀಯ ಕುಟುಂಬ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿ, ತಾವು ತಹಸೀಲ್ದಾರ್ ಸೇವೆಗೆ ಬಂದಾಗ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಬ್ರೋಕರ್ಗಳ ಸಂಖ್ಯೆ ಹೆಚ್ಚಾಗಿತ್ತು. ಅವರನ್ನು ಹತೋಟಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಯಾರಾದರೂ ಮಧ್ಯವರ್ತಿಗಳು ಸಾಕ್ಷಿ ಸಮೇತ ಸಿಕ್ಕಿದರೆ ಕಂಬಕ್ಕೆ ಕಟ್ಟಿ ಮೆಣಸಿನಕಾಯಿ ಊದಲು ಹಾಕಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರ ಇಲಾಖೆಯಲ್ಲಿನ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳಿಗೆ ನೇರವಾಗಿ ನೀಡುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರತಿ ಹೋಬಳಿ ಕೇಂದ್ರಗಳಿಗೆ ತೆರಳಿ ಅಗತ್ಯವಿದ್ದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಯಾವ ಗ್ರಾಮದಲ್ಲಿಯೂ ಫಲಾನುಭವಿಗಳು ಅರ್ಜಿ ಹಿಡಿದು ಬಾರದಂತೆ ಮಾಡುವುದು ತಮ್ಮ ಕಾರ್ಯವಾಗಿದೆ ಎಂದರು. ತಾಲೂಕಿನಲ್ಲಿ ಪಹಣಿ ತಿದ್ದುಪಡಿ ಹಾಗೂ ಪೌತಿ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿರುವರು ಕಾನೂನಿನ್ವಯ ಖಾತೆ ಮಾಡುವುದು ಕಂಡು ಬಂದಲ್ಲಿ ಅವರಿಗೆ ಖಾತೆ ಹಾಗೂ ಪಹಣಿ ತಿದ್ದುಪಡಿ ಮಾಡಲಾಗುವುದು ಎಂದು ತಿಳಿಸಿದರು. ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್, ತಾಲೂಕು ಅಂಗವಿಕಲ ಸಂಘದ ಅಧ್ಯಕ್ಷ ಸೋಮಶೇಖರ್ ಇದ್ದರು.