'ವಿಷ್ಣು ಹೃದಯವಂತ ಕಲಾವಿದ'
ಅರಸೀಕೆರೆ: ವಿಷ್ಣುವರ್ಧನ್ ಉತ್ತಮ ಕಲಾವಿದರಷ್ಟೇ ಅಲ್ಲ, ಒಬ್ಬ ಹೃದಯವಂತ ಮನುಷ್ಯ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ಪಟ್ಟಣದ ಗ್ರಂಥಾಲಯ ರಸ್ತೆಯಲ್ಲಿರುವ ವೆಂಕಟೇಶ್ವರ ಕಲಾಭವನದ ಮುಂಭಾಗ ವಿಷ್ಣು ವೇದಿಕೆ ಮಂಗಳವಾರ ಏರ್ಪಡಿಸಿದ್ದ 4ನೇ ಪುಣ್ಯಸ್ಮರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿತ್ರರಂಗದಲ್ಲಿ ಉತ್ತಮ ಅಭಿನಯದೊಂದಿಗೆ ನಾಡಿನ ಜನರ ಮನ ಗೆದ್ದ ಅವರು ತಮ್ಮ ಸಹಕಲಾವಿದರ ಕಷ್ಟಸುಖಗಳಲ್ಲಿ ಭಾಗಿಯಾಗಿ ಸ್ಪಂದಿಸುವ ಮೂಲಕ ತಾವೊಬ್ಬ ಹೃದಯವಂತ ಎಂಬುದನ್ನು ತೋರಿಸಿಕೊಟ್ಟಿದ್ದರು ಎಂದರು.
ಎಂದಿಗೂ ರಾಜಕೀಯ ಆಸೆ ಆಕಾಂಕ್ಷೆಗಳಿಗೆ ಒಳಗಾಗದೆ ಕಲಾಸೇವೆಯ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡು ಇನ್ನಿತರ ಕಲಾವಿದರ ಜೀವನಕ್ಕೆ ಆಧಾರವಾಗಿ ಕನ್ನಡ ನಾಡಿನ ಹಿರಿಮೆಯನ್ನು ಎತ್ತಿ ಹಿಡಿದ ಮಹಾನ್ ಪುರುಷ ಎಂದು ಬಣ್ಣಿಸಿದರು. ಪುರಸಭೆ ಅಧ್ಯಕ್ಷ ಮೋಹನ್ಕುಮಾರ್ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಕೊಡುಗೆ ಅಪಾರ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ ವಿನಾಯಕ ಭಕ್ತ ಮಂಡಳಿ ಅಧ್ಯಕ್ಷ ನಾಗರಾಜ್, ಉದ್ಯಮಿ ಅರುಣ್ಕುಮಾರ್, ಪುರಸಭಾ ಮಾಜಿ ಉಪಾಧ್ಯಕ್ಷ ಶಾಂತರಾಜ್, ಪುರಸಭಾ ಸದಸ್ಯರಾದ ಅನ್ನಪೂರ್ಣ, ಶೈಲೇಂದ್ರ, ಪಾರ್ಥಸಾರಥಿ, ವಿಷ್ಣು ವೇದಿಕೆ ಅಧ್ಯಕ್ಷ ಸತೀಶ್ ಇದ್ದರು.